ಮಧ್ಯಪ್ರದೇಶ | ಆಧ್ಯಾತ್ಮಿಕ ನಾಯಕರೊಬ್ಬರ ಸಲಹೆಯಂತೆ ಆಮರಣಾಂತ ಉಪವಾಸ; ಮೆದುಳಿನ ರೋಗದಿಂದ ಬಳಲುತ್ತಿದ್ದ 3 ವರ್ಷದ ಬಾಲಕಿ ಮೃತ್ಯು

ಸಾಂದರ್ಭಿಕ ಚಿತ್ರ | PC : freepik.com
ಇಂದೋರ್ : ಇಲ್ಲಿನ ಆಧ್ಯಾತ್ಮಿಕ ನಾಯಕರೊಬ್ಬರ ಸಲಹೆಯಂತೆ ಆಮರಣಾಂತ ಉಪವಾಸ ಮಾಡಿದ ಮೆದುಳಿನ ಗೆಡ್ಡೆ ರೋಗದಿಂದ ಬಳಲುತ್ತಿದ್ದ 3 ವರ್ಷದ ಬಾಲಕಿ ಮೃತಪಟ್ಟಿದ್ದಾರೆ.
ಸಲಹೆ ಸ್ವೀಕರಿಸಿದ ಪೋಷಕರು, ಸಲ್ಲೇಖನ ಎಂದೂ ಕರೆಯಲ್ಪಡುವ ಸಂತಾರ ಜೈನ ಧಾರ್ಮಿಕ ಆಚರಣೆಗೆ ಚಾಲನೆ ನೀಡಿದ ನಂತರ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಏಕೈಕ ಮಗುವಾಗಿದ್ದ ವಿಯಾನಾ ಜೈನ್ ಎಂಬ ಬಾಲಕಿ ಮಾರ್ಚ್ 21 ರಂದು ಕೊನೆಯುಸಿರೆಳೆದಿದ್ದಾರೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.
ಜೈನ ಧರ್ಮದ ಈ ಅಮರಣಾಂತ ಉಪವಾಸವನ್ನು ಜೈನ ಮುನಿಗಳು ತಮ್ಮ ಕೊನೆಯ ದಿನಗಳಲ್ಲಿ ಪಾಲಿಸುತ್ತಾರೆ. ಈ ಪದ್ಧತಿಯ ಪ್ರಕಾರ, ಆಧ್ಯಾತ್ಮಿಕ ಶುದ್ಧೀಕರಣ ಮತ್ತು ಪ್ರಪಂಚದಿಂದ ಬೇರ್ಪಡುವಿಕೆಯನ್ನು ಸಾಧಿಸಲು ಒಬ್ಬ ವ್ಯಕ್ತಿಯು ಸಾಯುವವರೆಗೂ ಆಹಾರ ಮತ್ತು ನೀರಿನ ಸೇವನೆಯನ್ನು ಕ್ರಮೇಣ ಕಡಿಮೆ ಮಾಡುತ್ತಾನೆ.
ಆಕೆಯ ಪೋಷಕರ ಪ್ರಕಾರ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ "ಜೈನ ಆಚರಣೆಯಾದ ಸಂತಾರವನ್ನು ಪ್ರತಿಜ್ಞೆ ಮಾಡಿದ ವಿಶ್ವದ ಅತ್ಯಂತ ಕಿರಿಯ ವ್ಯಕ್ತಿ" ಎಂದು ವಿಯಾನಾ ಹೆಸರಿನಲ್ಲಿ ಪ್ರಮಾಣಪತ್ರವನ್ನು ನೀಡಿದೆ.
ಮಾಹಿತಿ ತಂತ್ರಜ್ಞಾನ (ಐಟಿ) ವೃತ್ತಿಪರರಾಗಿ ಕೆಲಸ ಮಾಡುವ ಆಕೆಯ ಪೋಷಕರು, ಜೈನ ಮುನಿ (ಸನ್ಯಾಸಿ) ಸಲಹೆಯ ಮೇರೆಗೆ ತಮ್ಮ ಮಗಳನ್ನು ಸಂತಾರ ವ್ರತ ಮಾಡಲು ನಿರ್ಧರಿಸಿದ್ದೆವು ಎಂದು ಹೇಳಿದ್ದಾರೆ.
ಶನಿವಾರ ಪಿಟಿಐ ಜೊತೆ ಮಾತನಾಡಿದ ಹುಡುಗಿಯ ತಂದೆ ಪಿಯೂಷ್ ಜೈನ್, "ಈ ವರ್ಷದ ಜನವರಿಯಲ್ಲಿ ನನ್ನ ಮಗಳಿಗೆ ಮೆದುಳಿನಲ್ಲಿ ಗೆಡ್ಡೆ ಇರುವುದು ಪತ್ತೆಯಾಯಿತು. ಅವಳಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ನಂತರ ಅವಳ ಆರೋಗ್ಯ ಸುಧಾರಿಸಿತು. ಆದರೆ ಮಾರ್ಚ್ನಲ್ಲಿ, ಅವಳ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿತು. ಆಕೆ ಆಹಾರ ಮತ್ತು ಪಾನೀಯ ಸೇವಿಸಲು ಕಷ್ಟವಾಗುತ್ತಿತ್ತು. ಆ ಬಳಿಕ ಅವರು ಮಾರ್ಚ್ 21 ರ ರಾತ್ರಿ, ತಮ್ಮ ತೀವ್ರ ಅಸ್ವಸ್ಥ ಮಗಳನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ದರ್ಶನಕ್ಕಾಗಿ ಜೈನ ಸನ್ಯಾಸಿ ರಾಜೇಶ್ ಮುನಿ ಮಹಾರಾಜ್ ಬಳಿಗೆ ಕರೆದೊಯ್ದರು", ಎಂದರು.
"ಮಹಾರಾಜ್ ಜಿ ನನ್ನ ಮಗಳ ಸ್ಥಿತಿಯನ್ನು ನೋಡಿ ಹುಡುಗಿಯ ಅಂತ್ಯ ಸಮೀಪಿಸುತ್ತಿದೆ. ಅವಳಿಗೆ ಸಂತಾರ ವ್ರತವನ್ನು ನೀಡಬೇಕೆಂದು ಹೇಳಿದರು. ಈ ಉಪವಾಸವು ಜೈನ ಧರ್ಮದಲ್ಲಿ ಬಹಳ ಮಹತ್ವದ್ದಾಗಿದೆ. ಅದರ ಬಗ್ಗೆ ಯೋಚಿಸಿದ ನಂತರ, ನಾವು ಅಂತಿಮವಾಗಿ ಅದನ್ನು ಮಾಡಲು ಒಪ್ಪಿಕೊಂಡೆವು" ಎಂದು ಪೀಯುಷ್ ಹೇಳಿದರು.
ಸನ್ಯಾಸಿ ಸಂತಾರ ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಿದ ಕೆಲವೇ ನಿಮಿಷಗಳಲ್ಲಿ ಮಗಳು ನಿಧನರಾದರು ಎಂದು ಜೈನ್ ಹೇಳಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತನ್ನ ಮಗಳ ಹೆಸರನ್ನು ನೋಂದಾಯಿಸಿದೆ. ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ನೀಡಿದೆ ಎಂದು ಪೀಯುಷ್ ಜೈನ್ ಹೇಳಿದರು.
"ನನ್ನ ಮಗಳು ಸಂತಾರ ಪ್ರತಿಜ್ಞೆ ಮಾಡುವಂತೆ ಮಾಡುವ ನಿರ್ಧಾರ ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ನಾನು ವಿವರಿಸಲು ಸಾಧ್ಯವಿಲ್ಲ. ನನ್ನ ಮಗಳು ಮೆದುಳಿನ ಗೆಡ್ಡೆಯ ಆರೋಗ್ಯ ಸಮಸ್ಯೆಯಿಂದ ತುಂಬಾ ಬಳಲುತ್ತಿದ್ದಳು. ಅವಳನ್ನು ಆ ಸ್ಥಿತಿಯಲ್ಲಿ ನೋಡುವುದು ನನಗೆ ತುಂಬಾ ನೋವಿನ ಸಂಗತಿಯಾಗಿತ್ತು", ಎಂದು ಅವರ ತಾಯಿ ವರ್ಷಾ ಜೈನ್ ಹೇಳಿದರು.
ವಿಯನಾಳನ್ನು ನೆನಪಿಸಿಕೊಂಡ ತಾಯಿ ಭಾವುಕರಾಗಿ, "ನನ್ನ ಮಗಳು ತನ್ನ ಮುಂದಿನ ಜನ್ಮದಲ್ಲಿ ಯಾವಾಗಲೂ ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದರು.
2015 ರಲ್ಲಿ ರಾಜಸ್ಥಾನ ಹೈಕೋರ್ಟ್ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 309 (ಆತ್ಮಹತ್ಯೆಗೆ ಪ್ರಯತ್ನ) ಅಡಿಯಲ್ಲಿ ಈ ಪದ್ಧತಿಯನ್ನು ಶಿಕ್ಷಾರ್ಹ ಅಪರಾಧವೆಂದು ಘೋಷಿಸಿದಾಗ ಕಾನೂನು ಮತ್ತು ಧಾರ್ಮಿಕ ವಲಯಗಳಲ್ಲಿ ಸಂತಾರದ ಬಗ್ಗೆ ಚರ್ಚೆ ತೀವ್ರಗೊಂಡಿತು.
ಜೈನ ಸಮುದಾಯದ ವಿವಿಧ ಧಾರ್ಮಿಕ ಸಂಸ್ಥೆಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್, ರಾಜಸ್ಥಾನ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು.







