ಕೃಷ್ಣ ಜನ್ಮಾಷ್ಟಮಿಗೆ ವಿಶೇಷ ಕಾರ್ಯಕ್ರಮಗಳ ಆಯೋಜಿಸುವಂತೆ ಶಾಲಾ-ಕಾಲೇಜುಗಳಿಗೆ ಮಧ್ಯಪ್ರದೇಶ ಸರಕಾರ ಆದೇಶ

ಸಾಂದರ್ಭಿಕ ಚಿತ್ರ | PTI
ಭೋಪಾಲ: ಒಂದು ತಿಂಗಳ ಹಿಂದಷ್ಟೇ ಗುರು ಪೂರ್ಣಿಮೆಯ ಪ್ರಯುಕ್ತ ಎರಡು ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮಧ್ಯಪ್ರದೇಶದಾದ್ಯಂತ ಶಾಲೆಗಳಿಗೆ ನಿರ್ದೇಶನ ನೀಡಿದ್ದ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರಕಾರವು ಆ.26ರಂದು ನಡೆಯಲಿರುವ ಕೃಷ್ಣ ಜನ್ಮಾಷ್ಟಮಿಗಾಗಿ ಶಾಲಾ-ಕಾಲೇಜುಗಳಿಗೆ ಇಂತಹುದೇ ಆದೇಶವನ್ನು ಹೊರಡಿಸಿದೆ.
ಎಲ್ಲ ಸರಕಾರಿ ಹಾಗೂ ಖಾಸಗಿ ಶಾಲಾಕಾಲೇಜುಗಳು ವಿದ್ವಾಂಸರಿಂದ ಉಪನ್ಯಾಸಗಳನ್ನು ಏರ್ಪಡಿಸುವಂತೆ ಹಾಗೂ ಶ್ರೀಕೃಷ್ಣನ ಬೋಧನೆಗಳು,ಸೌಹಾರ್ದತೆ,ಜೀವನ ತತ್ವಜ್ಞಾನ ಮತ್ತು ಮೌಲ್ಯಗಳಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ನೋಡಿಕೊಳ್ಳಬೇಕು ಎಂದು ಸಾಮಾನ್ಯ ಆಡಳಿತ ಇಲಾಖೆಯು ಎಲ್ಲ ಜಿಲ್ಲಾಧಿಕಾರಿಗಳಿಗೆ ಆರು ಅಂಶಗಳ ಆದೇಶವನ್ನು ಹೊರಡಿಸಿದೆ.
ಆ.26ರಂದು ಎಲ್ಲ ಶಾಲಾಕಾಲೇಜುಗಳಲ್ಲಿ ಯೋಗದಂತಹ ಭಾರತದ ಪ್ರಾಚೀನ ಮತ್ತು ವಿಶೇಷ ಸಂಪ್ರದಾಯಗಳಿಗೆ ಸಂಬಂಧಿಸಿದ ಉಪನ್ಯಾಸಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಎಲ್ಲ ಶ್ರೀಕೃಷ್ಣ ದೇವಸ್ಥಾನಗಳ ಸ್ವಚ್ಛತೆ ಮತ್ತು ಅಲ್ಲಿ ಜನ್ಮಾಷ್ಟಮಿಯಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯನ್ನು ಖಚಿತಪಡಿಸಿಕೊಳ್ಳುವಂತೆ ಆದೇಶದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಜಾನಾಪಾವ(ದೇವಾಸ್),ಅಮ್ಝೇರಾ(ಧಾರ್),ನಾರಾಯಣ ಮತ್ತು ಸಾಂದೀಪನಿ ಆಶ್ರಮ(ಉಜ್ಜೈನ) ಸೇರಿದಂತೆ ಶ್ರೀಕೃಷ್ಣನ ಜೀವನಕ್ಕೆ ಸಂಬಂಧಿಸಿದ್ದು ಎಂದು ನಂಬಲಾಗಿರುವ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯನ್ನು ಆದೇಶದಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ.
ಆದೇಶವನ್ನು ವಿರೋಧಿಸಿರುವ ಕಾಂಗ್ರೆಸ್, ಶಿಕ್ಷಣ ಸಂಸ್ಥೆಗಳು ಕಲಿಕೆಯ ಕೇಂದ್ರಗಳಾಗಿವೆ ಎಂದು ಹೇಳಿದೆ.
ಈ ಸರಕಾರವೇಕೆ ಶಿಕ್ಷಣ ಸಂಸ್ಥೆಗಳನ್ನು ನಾಶಗೊಳಿಸುವ ಕೆಲಸವನ್ನು ಮಾಡುತ್ತಿದೆ? ಧಾರ್ಮಿಕ ಕಾರ್ಯಕ್ರಮಗಳಿಗೆ ರಜೆ ಘೋಷಿಸಲು ಅವಕಾಶವಿದೆ ಎಂದು ಕಾಂಗ್ರೆಸ್ ಶಾಸಕ (ಮಧ್ಯ ಭೋಪಾಲ) ಆರಿಫ್ ಮಸೂದ್ ಹೇಳಿದ್ದಾರೆ.
ಮಸೂದ್ ವಿರೋಧಕ್ಕೆ ಪ್ರತಿಕ್ರಿಯಿಸಿರುವ ಹುಝೂರ್ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ,ರಾಜ್ಯಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ನಮ್ಮ ಸರಕಾರವು ನಿರ್ಧರಿಸಿದೆ. ಇದು ಸರಕಾರದ ಉತ್ತಮ ನಡೆಯಾಗಿದೆ ಎಂದಿದ್ದಾರೆ.







