ಕರ್ನಾಟಕದ ಬಂಧಿತ ರೈತರನ್ನು ಉತ್ತರ ಪ್ರದೇಶದ ಗಡಿಯಲ್ಲಿ ತೊರೆದು ಹೋದ ಮಧ್ಯಪ್ರದೇಶದ ಪೊಲೀಸರು

Photo : thesouthfirst
ಹೊಸದಿಲ್ಲಿ : ‘ದಿಲ್ಲಿ ಚಲೋ’ ಜಾಥಾದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಕರ್ನಾಟಕದ ರೈತರ ತಂಡವನ್ನು ಫೆ.12ರಂದು ಬಂಧಿಸಿದ್ದ ಮಧ್ಯಪ್ರದೇಶ ಪೊಲೀಸರು, ಗುರುವಾರ ನಸುಕಿನಲ್ಲಿ ಉತ್ತರಪ್ರದೇಶದ ಗಡಿ ಭಾಗದಲ್ಲಿ ತೊರೆದುಹೋಗಿರುವುದಾಗಿ ವರದಿ ಯಾಗಿದೆ.
ಕರ್ನಾಟಕದ ರೈತರನ್ನು ಮಧ್ಯಪ್ರದೇಶದ ಪೊಲೀಸರು ಭೋಪಾಲದಿಂದ ಉತ್ತರಪ್ರದೇಶದ ವಾರಣಾಸಿಗೆ ರೈಲಿನಲ್ಲಿ ಕೊಂಡೊಯ್ಯುತ್ತಿದ್ದರು. ಆದರೆ ಮಧ್ಯಪ್ರದೇಶ- ಉತ್ತರಪ್ರದೇಶದ ಗಡಿಭಾಗದಲ್ಲಿ ಯಾವುದೇ ಮಾಹಿತಿ ನೀಡದೆ ಅವರನ್ನು ರೈಲಿನಿಂದ ಕೆಳಗಿಳಿಸಿದ್ದಾರೆ.
ಮಧ್ಯಪ್ರದೇಶದ ಪೊಲೀಸರು, ಅವರ ರಾಜ್ಯದ ವ್ಯಾಪ್ತಿಯಲ್ಲಿರುವ ಕೊನೆಯ ರೈಲು ನಿಲ್ದಾಣದಲ್ಲಿ ತಮ್ಮನ್ನು ರೈಲಿನಿಂದ ಕೆಳಗಿಳಿಸಿದರೆಂದು ಬಂಧಿತ ರೈತರಲ್ಲೊಬ್ಬರಾದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಹಾಗೂ ಚಾಮರಾಜನಗರ ಘಟಕದ ಪ್ರಧಾನ ಕಾರ್ಯದರ್ಶಿ ಕೆ. ನಾಗರಾಜ್ ಆರೋಪಿಸಿದ್ದಾರೆ.
‘‘ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರು, ನಮಗೆ ಸಂಜೆ ಹಾಗೂ ರಾತ್ರಿ ಹೊತ್ತು ಯಾವುದೇ ಆಹಾರ ಒದಗಿಸಲಿಲ್ಲ ಮತ್ತು ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡರು. ವಾರಣಾಸಿಗೆ ಕೊಂಡೊಯ್ಯುತ್ತಿದ್ದಾಗ ಅವರು ಮಾರ್ಗ ಮಧ್ಯದಲ್ಲೇ ನಮ್ಮನ್ನು ತೊರೆದುಹೋದರು. ಆದರೂ, ನಾವು ಆನಂತರ ಆಯೋಧ್ಯೆಯನ್ನು ತಲುಪಿದೆವು’’ ಎಂದು ನಾಗರಾಜ್ ತಿಳಿಸಿದರು.
‘‘ತಮ್ಮೊಂದಿಗೆ ಬರುವಂತೆ ಉತ್ತರಪ್ರದೇಶ ಪೊಲೀಸರು, ಕರ್ನಾಟಕದ ರೈತರನ್ನು ಕೇಳಿಕೊಂಡರಾದರೂ ನಾವು ನಿರಾಕರಿಸಿದೆವು ಮತ್ತು ಖಾಸಗಿ ವಸತಿಗೃಹಗಳಿಗೆ ತೆರಳಿದೆವು’’ ಎಂದು ನಾಗರಾಜ್ ಹೇಳಿದ್ದಾರೆ.
‘‘ ನಮ್ಮ ಸಂಘದ ಅಧ್ಯಕ್ಷರಾದ ಕುರುಬೂರ್ ಶಾಂತಕುಮಾರ್ ಇನ್ನೂ ದಿಲ್ಲಿಯಲ್ಲಿದ್ದಾರೆ. ಕೇಂದ್ರ ಸರಕಾರವು ಚಂಡೀಗಢದಲ್ಲಿ ರೈತ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದೆ. ಈ ಮಾತುಕತೆಯ ಫಲಿತಾಂಶವನ್ನು ಆಧರಿಸಿ, ರಾಜ್ಯಕ್ಕೆ ಹಿಂತಿರುಗಬೇಕೋ ಅಥವಾ ದಿಲ್ಲಿಗೆ ಪ್ರಯಾಣಿಸಬೇಕೋ’’ ಎಂಬ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ನಾಗರಾಜ್ ತಿಳಿಸಿದ್ದಾರೆ.
30 ಮಂದಿ ಮಹಿಳೆಯರು ಸೇರಿದಂತೆ 100 ಮಂದಿ ರೈತರನ್ನು ಫೆಬ್ರವರಿ 12ರಂದು ಮಧ್ಯಪ್ರದೇಶ ಪೊಲೀಸರು ಭೋಪಾಲದಲ್ಲಿ ಬಂಧಿಸಿದ್ದರು.







