ಮಧ್ಯಪ್ರದೇಶ | ಆದಿವಾಸಿ ಯುವಕನ ಕಸ್ಟಡಿ ಸಾವು : ಆರೋಪಿ ಪೊಲೀಸ್ ಅಧಿಕಾರಿಗಳ ಬಂಧನಕ್ಕೆ ಸಿಬಿಐಗೆ ಅ.7ರವರೆಗೆ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ, ಸೆ. 27: ಆದಿವಾಸಿ ಯುವಕನಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಹಾಗೂ ಆತನ ಸಾವಿಗೆ ಕಾರಣವಾದ ಆರೋಪಕ್ಕೆ ಸಂಬಂಧಿಸಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಕ್ಟೋಬರ್ 7ರ ಒಳಗೆ ಬಂಧಿಸಲು ವಿಫಲವಾದರೆ, ಸಿಬಿಐ ಅಧಿಕಾರಿಗಳು ಹಾಗೂ ಮಧ್ಯಪ್ರದೇಶ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಎಚ್ಚರಿಸಿದೆ.
ತನ್ನ ಆದೇಶ ಪಾಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ ಎಂದು ಕಾನೂನು ಸುದ್ದಿವಾಹಿನಿ ಸಂಸ್ಥೆಯೊಂದು ಉಲ್ಲೇಖಿಸಿದೆ. ‘‘ಒಂದು ವೇಳೆ ನಿರ್ದೇಶನ ಪಾಲಿಸದೇ ಇದ್ದರೆ, ಹೇಗೆ ಅನುಸರಿಸುವಂತೆ ಮಾಡಬೇಕು ಎಂಬುದು ನಮಗೆ ಗೊತ್ತಿದೆ. ನಾವು ನ್ಯಾಯಾಂಗ ನಿಂದನೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಿದ್ದೇವೆ’’ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಅದು ತಿಳಿಸಿದೆ.
2024 ಜುಲೈಯಲ್ಲಿ 25 ವರ್ಷದ ಯುವಕ ದೇವ ಪರ್ಧಿಯ ವಿವಾಹದ ಮುನ್ನ ಆತ ಹಾಗೂ ಆತನ ಮಾವ ಗಂಗಾರಾಮ್ ಪರ್ದಿಯನ್ನು ಕಳವಿನ ಆರೋಪದಲ್ಲಿ ಬಂಧಿಸಲಾಗಿತ್ತು. ಅನಂತರ ದೇವ ಪರ್ಧಿ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ ಎಂದು ಆತನ ಕುಟುಂಬಕ್ಕೆ ಮಾಹಿತಿ ನೀಡಲಾಗಿತ್ತು.
ದೇವ ಪರ್ದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಪ್ರತಿಪಾದಿಸಿದ್ದರು ಆದರೆ, ಪರ್ಧಿ ಕುಟುಂಬ, ಇಬ್ಬರಿಗೂ ಕಸ್ಟಡಿಯಲ್ಲಿ ಚಿತ್ರ ಹಿಂಸೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಮಧ್ಯಪ್ರದೇಶ ಪೊಲೀಸರು ನ್ಯಾಯಯುತ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಲಿಲ್ಲ ಎಂದು ಸುಪ್ರೀಂ ಕೋರ್ಟ್ ಕಂಡುಕೊಂಡ ಬಳಿಕ ಪ್ರಕರಣವನ್ನು ಮೇ.15ರಂದು ಸಿಬಿಐಗೆ ವರ್ಗಾಯಿಸಲಾಗಿತ್ತು.
ಈ ಸಾವಿಗೆ ಅಧಿಕಾರಿಗಳು ಹೊಣೆಗಾರರಾಗಿದ್ದಾರೆ ಎಂದು ತಿಳಿದು ಬಂದರೆ, ಅವರನ್ನು ತಿಂಗಳ ಒಳಗೆ ಬಂಧಿಸಬೇಕು ಎಂದು ಸುಪ್ರೀಂ ಕೋರ್ಟ್ ಆಗ ನಿರ್ದೇಶಿಸಿತ್ತು.
ದೇವ ಪರ್ಧಿ ತಾಯಿ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಪ್ರಕರಣದ ಆರೋಪಿಗಳಾದ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲು ಸಿಬಿಐಗೆ ಎರಡು ದಿನಗಳ ಕಾಲಾವಕಾಶ ನೀಡಿತ್ತು.







