ಮಧ್ಯಪ್ರದೇಶ | 2.283 ಕೋಟಿ ರೂ. ಮೊತ್ತದ ಹೂಡಿಕೆ ಜಾಲ ಬೇಧಿಸಿದ ಎಸ್ಟಿಎಫ್

ಸಾಂದರ್ಭಿಕ ಚಿತ್ರ | PC : NDTV
ಮುಂಬೈ: ಸರಿಸುಮಾರು 2,283 ಕೋಟಿ ರೂ. ಮೊತ್ತದ ಹೂಡಿಕೆ ಹಗರಣವನ್ನು ಮಧ್ಯಪ್ರದೇಶ ವಿಶೇಷ ಕಾರ್ಯ ಪಡೆ (ಎಸ್ಟಿಎಫ್) ಬೇಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಎಸ್ಟಿಎಫ್ ಅಧಿಕಾರಿಗಳು ದಿಲ್ಲಿಯಿಂದ ದೀಪಕ್ ಶರ್ಮಾ ಹಾಗೂ ಮದನ್ ಮೋಹನ್ ಕುಮಾರ್ ಎಂಬವರನ್ನು ಬಂಧಿಸಿದ್ದಾರೆ.
ಶೆಲ್ ಕಂಪೆನಿಗಳಾದ ಯೋರ್ಕರ್ ಎಫ್ಎಕ್ಸ್ ಹಾಗೂ ಯೋರ್ಕರ್ ಕ್ಯಾಪಿಟಲ್ ಮೂಲಕ ನಿರ್ವಹಣೆಯಾಗುತ್ತಿರುವ ಬೋಟ್ ಬ್ರೋದಂತಹ ಆನ್ಲೈನ್ ಟ್ರೇಡಿಂಗ್ ವೇದಿಕೆಗಳ ಸೋಗಿನಲ್ಲಿ 7 ರಾಜ್ಯಗಳಲ್ಲಿ ಸಾವಿರಾರು ಹೂಡಿಕೆದಾರರಿಗೆ ವಂಚಿಸಿದ ಪ್ರಕರಣ ಇದಾಗಿದೆ.
ತನ್ನ 20.18 ಲಕ್ಷ ಹೂಡಿಕೆಗೆ ಪ್ರತಿ ತಿಂಗಳು ಶೇ. 6ರಿಂದ 8 ರಿಟರ್ನ್ಸ್ ನೀಡುವ ಭರವಸೆ ನೀಡಲಾಗಿತ್ತು ಎಂದು ಇಂದೋರ್ನ ನಿವಾಸಿ ಇಶಾನ್ ಸಲುಜಾ ಅವರು ದೂರೂ ದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ರಾಯ್ನೆಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಹಾಗೂ ಕಿಂಡೆಂಟ್ ಬ್ಯುಸಿನೆಸ್ ಸೊಲ್ಯುಷನ್ಸ್ ಪ್ರೈವೇಟ್ ಲಿಮಿಟೆಡ್ ಖಾತೆಗಳಿಗೆ ಹೂಡಿಕೆದಾರರರಿಂದ ನಿಧಿ ಸಂಗ್ರಹಿಸುತ್ತಿದ್ದರು. ಅನಂತರ ಅದನ್ನು ಮೇಟಾ-5 ಖಾತೆಗಳ ಮೂಲಕ ಫೋರೆಕ್ಸ್ ಟ್ರೇಡಿಂಗ್ಗೆ ಅಮೆರಿಕ ಡಾಲರ್ ಆಗಿ ಪರಿವರ್ತಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಎಸ್ಟಿಎಫ್ 20ಕ್ಕೂ ಅಧಿಕ ಸಂದೇಹಾಸ್ಪದ ಬ್ಯಾಂಕ್ ಖಾತೆಗಳಿಂದ ಸುಮಾರು 90 ಕೋಟಿ ರೂ.ವನ್ನು ಸ್ತಂಭನಗೊಳಿಸಿದೆ.







