ಕೇಂದ್ರವು ಸುದ್ದಿಸಂಸ್ಥೆಗಳ ಒಡೆತನ ನಿಯಂತ್ರಣಕ್ಕೆ ಕಾನೂನುಗಳನ್ನು ತರಬೇಕು: ಶಶಿ ತರೂರ್
ಶಶಿ ತರೂರ್ | Photo: PTI
ತಿರುವನಂತಪುರಂ : ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ದೇಶದಲ್ಲಿ ಜವಾಬ್ದಾರಿಯುತ ಪತ್ರಿಕೋದ್ಯಮ ಮತ್ತು ಮುಕ್ತ ಪತ್ರಿಕಾ ಮಾಧ್ಯಮವನ್ನು ಖಚಿತಪಡಿಸಿಕೊಳ್ಳಲು ರಾಜಕೀಯ ಅಥವಾ ಉದ್ಯಮ ಸಂಸ್ಥೆಗಳಿಂದ ಸುದ್ದಿಸಂಸ್ಥೆಗಳ ಒಡೆತನವನ್ನು ನಿಯಂತ್ರಿಸಲು ಕಾನೂನುಗಳನ್ನು ತರುವುದು ಸೇರಿದಂತೆ ಹಲವಾರು ಸಲಹೆಗಳನ್ನು ನೀಡಿದ್ದಾರೆ.
ಸೋಮವಾರ ಇಲ್ಲಿ ಎನ್.ರಾಮಚಂದ್ರನ್ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ತರೂರ್, ಖಾಸಗಿ ವ್ಯಕ್ತಿಯ ಮಾಧ್ಯಮ ಒಡೆತನಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಣಗಳಿಲ್ಲದ ಜಗತ್ತಿನ ಕೆಲವೇ ದೇಶಗಳಲ್ಲಿ ಭಾರತವು ಒಂದಾಗಿದೆ. ಒಂದೇ ಉದ್ಯಮ ಅಥವಾ ರಾಜಕೀಯ ಸಂಸ್ಥೆಯು ಹಲವಾರು ಸುದ್ದಿಸಂಸ್ಥೆಗಳ ಒಡೆತನವನ್ನು ಹೊಂದಿರುವುದರ ಮೇಲೆ ಮಿತಿಯನ್ನು ಹೇರಲು ಸರಕಾರವು ಕಾನೂನುಗಳು ಮತ್ತು ನಿಯಮಗಳನ್ನು ತರಬೇಕು. ಆ ಮೂಲಕ ದೇಶದಲ್ಲಿ ದೃಢ ಮತ್ತು ಸ್ವತಂತ್ರ ಪತ್ರಿಕೋದ್ಯಮವನ್ನು ಉತ್ತೇಜಿಸಬೇಕು ಎಂದು ಹೇಳಿದರು.
ಭಾರತದಲ್ಲಿಯ ಹೆಚ್ಚಿನ ಮಾಧ್ಯಮಗಳು ವಾಸ್ತವಾಂಶಗಳ ಮೇಲೆ ಸವಾರಿ ಮಾಡುವ ಧೋರಣೆಯನ್ನು ಹೊಂದಿವೆ ಮತ್ತು ತಪ್ಪು ಸುದ್ದಿಗಳಿಗೆ ಸಂಬಂಧಿಸಿದಂತೆ ತಿದ್ದುಪಡಿಗಳನ್ನು ಹೊರಡಿಸಲು ಹಿಂದೇಟು ಹೊಡೆಯುತ್ತಿವೆ ಎಂದು ಅವರು ಹೇಳಿದರು.
ಮಾಧ್ಯಮಗಳೊಂದಿಗಿನ ತನ್ನ ಸ್ವಂತ ಅನುಭವಗಳು ಮತ್ತು ಮಾಧ್ಯಮಗಳಲ್ಲಿ ತನ್ನ ವಿರುದ್ಧದ ಆರೋಪಗಳ ಕುರಿತು ಕಾನೂನು ಸಮರವನ್ನು ನಡೆಸುವ ತನ್ನ ನಿರ್ಧಾರವನ್ನು ಪ್ರಸ್ತಾಪಿಸಿದ ತರೂರ್, ‘ಚಾರಿತ್ರ್ಯಹನನವನ್ನು ತಡೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ನಡೆಸುವ ಮುನ್ನವೇ ಅಂತಹ ಚಾರಿತ್ರ್ಯಹನನ ನಡೆದುಹೋಗಬಹುದು. ನಮ್ಮ ದೇಶದಲ್ಲಿ ಟಿವಿ ವಾಹಿನಿಗಳ ಉಸಿರುಗಟ್ಟಿಸುವ ಬ್ರೇಕಿಂಗ್ ನ್ಯೂಸ್ ವೇಗಕ್ಕೆ ಹೋಲಿಸಿದರೆ ನ್ಯಾಯವು ತುಂಬ ನಿಧಾನವಾಗಿ ಚಲಿಸುತ್ತದೆ. ಹೀಗಾಗಿ ಮಾಧ್ಯಮಗಳಲ್ಲಿ ವಿಶ್ವಾಸ ಕ್ಷೀಣಿಸುತ್ತಿದ್ದರೆ ಆಶ್ಚರ್ಯವೇನಿಲ್ಲ ’ ಎಂದರು.