Madhya Pradesh | ಸಿಎಂ ತವರು ಜಿಲ್ಲೆಯ ತರಾನಾದಲ್ಲಿ ವಿಎಚ್ಪಿ ನಾಯಕನ ಮೇಲೆ ಹಲ್ಲೆ ಬೆನ್ನಲ್ಲೇ ಹಿಂಸಾಚಾರ

PC: x.com/ndtv
ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ತರಾನಾ ಪಟ್ಟಣದಲ್ಲಿ ವಿಎಚ್ಪಿ ನಾಯಕನ ಮೇಲೆ ನಡೆದ ಹಲ್ಲೆಯ ಬೆನ್ನಲ್ಲೇ ತೀವ್ರ ಹಿಂಸಾಚಾರ ಉಂಟಾಗಿದೆ. ಎರಡು ದಿನಗಳ ಕಾಲ ಪಟ್ಟಣದಲ್ಲಿ ವ್ಯಾಪಕ ಮಟ್ಟದ ವಿಧ್ವಂಸಕ ಕೃತ್ಯಗಳು ನಡೆದಿದೆ ಎನ್ನಲಾಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿವೆ.
ಉಜ್ಜಯಿನಿ ಜಿಲ್ಲೆಯು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಡಾ. ಮೋಹನ್ ಯಾದವ್ ಅವರ ತವರು ಜಿಲ್ಲೆಯಾಗಿರುವುದರಿಂದ, ಈ ಘಟನೆ ರಾಜಕೀಯ ಹಾಗೂ ಆಡಳಿತಾತ್ಮಕವಾಗಿ ಹೆಚ್ಚಿನ ಸೂಕ್ಷ್ಮತೆಯನ್ನು ಪಡೆದುಕೊಂಡಿದೆ.
ಗುರುವಾರ ರಾತ್ರಿ, ವಿಎಚ್ಪಿಯ ಗೋ ಸೇವಾ ಪ್ರಕೋಷ್ಠದ ಮುಖ್ಯಸ್ಥ ಸೋಹಲ್ ಠಾಕೂರ್ ಬುಂದೇಲಾ ಅವರ ಮೇಲೆ ಕೆಲವರು ಮಾತಿನ ಚಕಮಕಿಯ ನಂತರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕ್ಷುಲ್ಲಕ ವಿಚಾರವಾಗಿ ಆರಂಭವಾದ ವಾಗ್ವಾದವು ಶೀಘ್ರವೇ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು, ಈ ವೇಳೆ ಠಾಕೂರ್ ಅವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಹಲ್ಲೆಯ ಬಳಿಕ ಎರಡೂ ಗುಂಪುಗಳು ಬೀದಿಗಿಳಿದು ಕಲ್ಲು ತೂರಾಟ ನಡೆಸಿದ್ದು, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ. ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಕನಿಷ್ಠ 11 ಬಸ್ಗಳು, ಹಲವು ಕಾರುಗಳು ಹಾಗೂ ಬೈಕ್ಗಳು ಧ್ವಂಸಗೊಂಡಿವೆ. ತಡರಾತ್ರಿ ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದವು. ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತರಾನಾ ಪಟ್ಟಣದಾದ್ಯಂತ ಬಿಎನ್ಎಸ್ಎಸ್ನ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಆದರೆ ಶುಕ್ರವಾರ ಮಧ್ಯಾಹ್ನ ಎರಡೂ ಕಡೆಯ ಶಸ್ತ್ರಸಜ್ಜಿತ ಗುಂಪುಗಳು ಪರಸ್ಪರ ಮುಖಾಮುಖಿಯಾಗಿದ್ದು, ಮತ್ತೆ ಉದ್ವಿಗ್ನತೆ ಉಂಟಾಯಿತು. ಸ್ಥಳೀಯ ಪೊಲೀಸರ ಮೇಲೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ, ಹಿಂಸಾಚಾರವನ್ನು ನಿಯಂತ್ರಿಸಲು ಜಿಲ್ಲೆಯ ಐದರಿಂದ ಹತ್ತು ಪೊಲೀಸ್ ಠಾಣೆಗಳಿಂದ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಯಿತು.
ಮತ್ತೆ ನಡೆದ ಘರ್ಷಣೆಯಲ್ಲಿ ವಾಹನಗಳು, ಮನೆಗಳು ಹಾಗೂ ಅಂಗಡಿಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ. ಕತ್ತಿಗಳು, ರಾಡ್ಗಳು ಹಾಗೂ ಲಾಠಿಗಳನ್ನು ಹಿಡಿದ ಶಸ್ತ್ರಸಜ್ಜಿತ ಜನರು ತಮ್ಮ ನೆರೆಹೊರೆಯ ಪ್ರದೇಶಗಳಿಗೆ ನುಗ್ಗಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೂಜಾ ಸ್ಥಳವನ್ನು ಗುರಿಯಾಗಿಸಲು ಪ್ರಯತ್ನಿಸಿದ್ದಾರೆ ಎಂದು ಒಂದು ಸಮುದಾಯದ ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ, ಪೊಲೀಸರ ಸಮ್ಮುಖದಲ್ಲಿಯೇ ಬೀಗ ಹಾಕಿದ್ದ ಮನೆಗಳಿಗೆ ಶಸ್ತ್ರಸಜ್ಜಿತ ಜನರು ನುಗ್ಗಲು ಯತ್ನಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಕೋಮು ಹಿಂಸಾಚಾರದ ಇತಿಹಾಸವಿಲ್ಲದ ತರಾನಾ ಪಟ್ಟಣದಲ್ಲಿ ಉಂಟಾದ ಅಶಾಂತಿಯನ್ನು ಈ ದೃಶ್ಯಗಳು ಸ್ಪಷ್ಟವಾಗಿ ತೋರಿಸುತ್ತವೆ. ಇತರೆ ವೀಡಿಯೊಗಳಲ್ಲಿ ಎರಡೂ ಕಡೆಯವರು ಬಹಿರಂಗವಾಗಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಾ ಪರಸ್ಪರ ಸವಾಲು ಹಾಕುತ್ತಿರುವುದು ಕಂಡುಬಂದಿದ್ದು, ಜನಸಮೂಹವನ್ನು ಚದುರಿಸಲು ಪೊಲೀಸರು ಪರದಾಡುತ್ತಿರುವ ದೃಶ್ಯಗಳು ದಾಖಲಾಗಿವೆ.
ಶುಕ್ರವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಗಾಯಗೊಂಡ ವಿಎಚ್ಪಿ ನಾಯಕನ ಬೆಂಬಲಿಗರು ತರಾನಾ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು. ಬಂಧಿತರನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಬೇಕು ಹಾಗೂ ಅವರ ಮನೆಗಳನ್ನು ಕೆಡವಬೇಕು ಎಂದು ಅವರು ಒತ್ತಾಯಿಸಿದರು.
ಸ್ಥಳೀಯ ವರದಿಗಳ ಪ್ರಕಾರ, ಹಿಂಸಾಚಾರದ ಅವಧಿಯಲ್ಲಿ ಕನಿಷ್ಠ 13 ಬಸ್ಗಳು ಹಾಗೂ 10 ಕಾರುಗಳು ತೀವ್ರವಾಗಿ ಹಾನಿಗೊಳಗಾಗಿವೆ. ಒಂದು ಬಸ್ಗೆ ಬೆಂಕಿ ಹಚ್ಚಲಾಗಿದ್ದು, ನಾಲ್ಕರಿಂದ ಆರು ಮನೆಗಳಿಗೆ ಹಾನಿಯಾಗಿದೆ.
“ಇಲ್ಲಿಯವರೆಗೆ 15ರಿಂದ 20 ಮಂದಿಯನ್ನು ಬಂಧಿಸಿದ್ದೇವೆ. ಗಲಭೆಯಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ವೀಡಿಯೊಗಳನ್ನು ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ.
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ–2026ರಲ್ಲಿ ಭಾಗವಹಿಸಿ ಶುಕ್ರವಾರ ಭೋಪಾಲ್ಗೆ ಹಿಂತಿರುಗಿದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು, “ಹಿಂಸಾಚಾರದಲ್ಲಿ ತೊಡಗಿರುವ ಯಾರನ್ನೂ ಬಿಡಲಾಗುವುದಿಲ್ಲ. ಎಲ್ಲ ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ತರಾನಾ ಶಹರ್ ಖಾಜಿ ಸಫಿಯುಲ್ಲಾ ಹಾಗೂ ಸ್ಥಳೀಯ ಕಾಂಗ್ರೆಸ್ ಶಾಸಕ ಮಹೇಶ್ ಪರ್ಮಾರ್ ಶಾಂತಿ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ತರಾನಾ ಪಟ್ಟಣವು ಯಾವುದೇ ಪ್ರಮುಖ ಕೋಮು ಘರ್ಷಣೆಯ ಇತಿಹಾಸವನ್ನು ಹೊಂದಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.
“ಗುರುವಾರ ನಡೆದ ಘಟನೆಗೆ ಕಾರಣವಾದವರನ್ನು ಕಾನೂನಿನ ಪ್ರಕಾರ ಕಟ್ಟುನಿಟ್ಟಾಗಿ ಶಿಕ್ಷಿಸಬೇಕು. ಆದರೆ ಅದರ ನೆಪದಲ್ಲಿ ನಿರಪರಾಧಿಗಳನ್ನು ಗುರಿಯಾಗಿಸಬಾರದು,” ಎಂದು ಅವರು ತಿಳಿಸಿದ್ದಾರೆ.







