"ಭಕ್ತರಿಗೆ ಪ್ರಯೋಜನವಾದರೆ ದೇವರೂ ಕ್ಷಮಿಸುತ್ತಾನೆ": ಮೆಟ್ರೋ ಕಾಮಗಾರಿಗೆ ಎರಡು ದೇವಾಲಯಗಳ ಜಮೀನು ಸ್ವಾಧೀನ ಪಡಿಸಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್

ಮದ್ರಾಸ್ ಹೈಕೋರ್ಟ್ (PTI)
ಚೆನ್ನೈ: ಮೆಟ್ರೋ ರೈಲು ಕಾಮಗಾರಿಗಾಗಿ ಎರಡು ದೇವಾಲಯಗಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದ್ದು, “ಅಭಿವೃದ್ಧಿಯಿಂದ ಭಕ್ತರಿಗೂ ಪ್ರಯೋಜನವಾದರೆ ದೇವರು ಸ್ವಾಧೀನಪಡಿಸಿಕೊಳ್ಳುವುದನ್ನು ಕ್ಷಮಿಸುತ್ತಾನೆ” ಎಂದು ಹೇಳಿದೆ.
ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಭೂಮಿಯನ್ನು ಸಾರ್ವಜನಿಕ ಯೋಜನೆಗಳಿಗೆ ಸ್ವಾಧೀನಪಡಿಸಿಕೊಳ್ಳುವುದರಿಂದ ವಿನಾಯಿತಿ ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಹೇಳಿದರು.
ರತಿನ ವಿನಾಯಗರ್ ದೇವಸ್ಥಾನ ಮತ್ತು ದುರ್ಗಾಯಿ ಅಮ್ಮನ್ ದೇವಸ್ಥಾನದ ಭೂಮಿಯ ಸ್ವಾಧೀನವನ್ನು ವಿರೋಧಿಸಿ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ದೇವಾಲಯದ ಭೂಮಿಯ ಬದಲಿಗೆ ಅಣ್ಣಾ ಸಾಲೈನಲ್ಲಿರುವ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ಗೆ ಸೇರಿದ ಸ್ಥಳದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿರುವುದಾಗಿ CMRL ನ್ಯಾಯಾಲಯಕ್ಕೆ ತಿಳಿಸಿತ್ತು. ಇದನ್ನು ವಿರೋಧಿಸಿರುವ ವಿಮಾ ಕಂಪನಿಯು ನ್ಯಾಯಾಲಯದ ಮೆಟ್ಟಿಲೇರಿದ್ದು, CMRL ನಿಂದ NOC ಪಡೆದ ನಂತರವೇ ತನ್ನ ಕಟ್ಟಡವನ್ನು ಅಭಿವೃದ್ಧಿಪಡಿಸಲು ₹250 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿಕೊಂಡಿದೆ.
ವಿಚಾರಣೆ ನಡೆಸಿದ ನ್ಯಾಯಾಲಯವು, ಆ ಪ್ರದೇಶದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಸ್ಥಾಪಿಸಲು CMRL ವಿಮಾ ಕಂಪನಿಗೆ NOC ನೀಡಿತ್ತು. ಹಾಗಾಗಿ, CMRL ನ ಕ್ರಮವು ಎಲ್ಲಾ ಹಂತಗಳಲ್ಲಿ ನೈಸರ್ಗಿಕ ನ್ಯಾಯದ ತತ್ವಗಳ ಸಂಪೂರ್ಣ ಉಲ್ಲಂಘನೆಯಾಗಿದೆ. CMRL ಅಂತಹ ಕ್ರಮ ಕೈಗೊಳ್ಳುವ ಹಕ್ಕನ್ನು ಹೊಂದಿಲ್ಲ ಎಂದು ಹೇಳಿದ್ದು, ವಿಮಾ ಕಂಪನಿಯ ವಿರುದ್ಧ CMRL ಹೊರಡಿಸಿದ ಸ್ವಾಧೀನ ನೋಟಿಸ್ ಅನ್ನು ರದ್ದುಗೊಳಿಸಿತು.