ಯಾವುದೇ ನಿರ್ದಿಷ್ಟ ಜಾತಿಯು ದೇವಸ್ಥಾನದ ಆಡಳಿತದ ಹಕ್ಕು ಮಂಡಿಸುವಂತಿಲ್ಲ: ಮದ್ರಾಸ್ ಹೈಕೋರ್ಟ್

ಮದ್ರಾಸ್ ಹೈಕೋರ್ಟ್ | Photo Credit : PTI
ಚೆನ್ನೈ: ಯಾವುದೇ ಜಾತಿಯು ದೇವಸ್ಥಾನದ ಆಡಳಿತದ ಮೇಲೆ ಹಕ್ಕು ಮಂಡಿಸುವಂತಿಲ್ಲ ಎಂದು ಹೇಳಿರುವ ಮದ್ರಾಸ್ ಉಚ್ಚ ನ್ಯಾಯಾಲಯವು, ಜಾತಿಯು ಧಾರ್ಮಿಕ ಪಂಥವಲ್ಲ ಎಂದು ಒತ್ತಿ ಹೇಳಿದೆ. ಅಧಿಕಾರಿಗಳು ಜಾತಿಯನ್ನು ಪರಿಗಣಿಸದೆ ನೇಮಕಾತಿಗಳನ್ನು ಮಾಡಿದಾಗ ಅದು ತಪ್ಪು ಎಂದು ಭಾವಿಸಬಾರದು ಎಂದೂ ನ್ಯಾಯಾಲಯವು ಹೇಳಿದೆ.
ತಮಿಳುನಾಡು ಸರಕಾರವು ಸೇಲಂ ಜಿಲ್ಲೆಯ ಬೇಲೂರಿನ ಅರುಳ್ಮಿಗು ಶ್ರೀ ತಂತೊಂಡ್ರೀಶ್ವರಾರ್ ದೇವಸ್ಥಾನಕ್ಕೆ ಐವರು ಆನುವಂಶಿಕೇತರ ಟ್ರಸ್ಟಿಗಳನ್ನು ನೇಮಿಸಿ ಹೊರಡಿಸಿದ ಆದೇಶವನ್ನು ಶನಿವಾರ ಎತ್ತಿಹಿಡಿದ ನ್ಯಾ.ಡಿ. ಭರತ ಚಕ್ರವರ್ತಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಯಾವುದೇ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಜಾತಿಯು ಯಾವುದೇ ಹಕ್ಕು ಹೊಂದಿರುವಂತಿಲ್ಲ. ಆದ್ದರಿಂದ ಜಾತಿಯ ಆಧಾರದಲ್ಲಿ ಅರ್ಜಿದಾರರು ಮಾಡಿಕೊಂಡಿರುವ ಮನವಿಯನ್ನು ತಿರಸ್ಕರಿಸಲಾಗಿದೆ, ಅದು ಸರಕಾರದ ನೀತಿಗೆ ವಿರುದ್ಧವಾಗಿದೆ ಮತ್ತು ಆ ಉದ್ದೇಶಕ್ಕಾಗಿ ಜಾತಿಯು ಧಾರ್ಮಿಕ ಪಂಥವಲ್ಲ ಎನ್ನುವುದನ್ನೂ ಎತ್ತಿ ಹಿಡಿಯಲಾಗಿದೆ ಎಂದು ಹೇಳಿದರು. ಶಿವರಾಮನ್ ಎನ್ನುವವರು ಟ್ರಸ್ಟಿಗಳ ನೇಮಕಗಳನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಿದ್ದರು.
ತಾನು ನಿರ್ದಿಷ್ಟ ಜಾತಿಗೆ ಸೇರಿದ್ದು, ಆ ಜಾತಿಯ ಜನರು ದೇವಸ್ಥಾನದ ರಥವನ್ನು ಎಳೆಯುವ ಮೊದಲ ಹಕ್ಕನ್ನು ಹೊಂದಿದ್ದರು ಮತ್ತು ದೇವಸ್ಥಾನವನ್ನೂ ಅದೇ ಜಾತಿಯ ವ್ಯಕ್ತಿಗಳು ನಿರ್ವಹಿಸುತ್ತಿದ್ದರು. ತನ್ನ ಜಾತಿಯಿಂದ ಯಾರನ್ನೂ ದೇವಸ್ಥಾನದ ಟ್ರಸ್ಟಿಯನ್ನಾಗಿ ನೇಮಿಸದ ಕಾರಣ ತಾನು ನ್ಯಾಯಾಲಯವನ್ನು ಸಂಪರ್ಕಿಸಿದ್ದೇನೆ ಎಂದು ಶಿವರಾಮನ್ ಅರ್ಜಿಯಲ್ಲಿ ಹೇಳಿಕೊಂಡಿದ್ದರು.
ನೆರೆಯ ಚಿನ್ನಮಾಣಿಕ್ಕನ್ಪಾಳ್ಯಂ ಗ್ರಾಮದ ಜನರೂ ಇದೇ ದೇವರನ್ನು ಆರಾಧಿಸುತ್ತಾರೆ ಮತ್ತು ಹಿಂದೆ ಈ ಗ್ರಾಮದ ಜನರೂ ದೇವಸ್ಥಾನದ ಆಡಳಿತದಲ್ಲಿ ಭಾಗಿಯಾಗಿದ್ದರು. ಈಗ ಅವರನ್ನೂ ದೂರವಿಡಲಾಗಿದೆ ಎನ್ನುವುದು ಅವರ ಎರಡನೇ ವಾದವಾಗಿತ್ತು.
ಸರಕಾರವು ನೇಮಿಸಿರುವ ಐವರು ಟ್ರಸ್ಟಿಗಳ ಪೈಕಿ ಮೂವರು ಒಂದೇ ಜಾತಿಗೆ ಸೇರಿದವರಾಗಿದ್ದಾರೆ ಎಂದು ಬೆಟ್ಟು ಮಾಡಿದ್ದ ಅವರು,ಇದಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದರು.
ಅಧಿಕಾರಿಗಳು ಪ್ರತಿ ಎರಡು ವರ್ಷಗಳಿಗೊಮ್ಮೆ ಟ್ರಸ್ಟಿಗಳನ್ನು ನೇಮಿಸುವಾಗ ಆ ನಿರ್ದಿಷ್ಟ ಗ್ರಾಮಕ್ಕೆ ಪ್ರಾತಿನಿಧ್ಯ ನೀಡುವ ಬಗ್ಗೆ ಕಾಳಜಿಯನ್ನು ವಹಿಸಬೇಕು. ನೇಮಕಾತಿಗಳನ್ನು ಶಾಸನಬದ್ಧವಾಗಿ ಮಾಡಿರುವುದರಿಂದ ಇತರ ಯಾವುದೇ ಕಾನೂನು ತೊಡಕುಗಳನ್ನು ಈ ನ್ಯಾಯಾಲಯದ ಗಮನಕ್ಕೆ ತರಲಾಗಿಲ್ಲ. ಹೀಗಾಗಿ ರಿಟ್ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಉಚ್ಚ ನ್ಯಾಯಾಲಯವು ತಿಳಿಸಿತು.







