Madhya Pradesh| ಖಾಸಗಿ ಶಾಲೆಯನ್ನು ಅನಧಿಕೃತ ಮದರಸಾ ಎಂದು ಸುಳ್ಳು ಪ್ರಚಾರ: ಸ್ಥಳೀಯ ಆಡಳಿತದಿಂದ ಧ್ವಂಸ

ಸಾಂದರ್ಭಿಕ ಚಿತ್ರ (PTI)
ಭೋಪಾಲ್: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನರ್ಸರಿಯಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಶಿಕ್ಷಣ ನೀಡಲು ನಿರ್ಮಿಸುತ್ತಿದ್ದ ಖಾಸಗಿ ಶಾಲೆಯನ್ನು ಅನಧಿಕೃತ ಮದರಸಾ ಎಂದು ಸುಳ್ಳು ಪ್ರಚಾರ ಮಾಡಿದ್ದು ಅದರ ಭಾಗಶಃ ಧ್ವಂಸಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ indianexpress.com ವರದಿ ಮಾಡಿದೆ.
ಸ್ಥಳೀಯ ನಿವಾಸಿ ಅಬ್ದುಲ್ ನಯೀಮ್ ಎಂಬವರು ಸಾಲವಾಗಿ ಪಡೆದ ಹಣ ಹಾಗೂ ಕುಟುಂಬದ ಉಳಿತಾಯ ಸೇರಿ ಸುಮಾರು 20 ಲಕ್ಷ ವೆಚ್ಚದಲ್ಲಿ ಶಾಲೆಯನ್ನು ನಿರ್ಮಿಸುತ್ತಿದ್ದರು. ಆದರೆ ಸ್ಥಳೀಯ ಆಡಳಿತದ ಆದೇಶದ ಮೇರೆಗೆ ಜನವರಿ 13ರ ಸಂಜೆ ಗೋಡೆಗಳು ಮತ್ತು ಮುಂಭಾಗದ ಶೆಡ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗಿದೆ.
ಧಾಬಾ ಗ್ರಾಮ ಮತ್ತು ಸುತ್ತಮುತ್ತಲಿನ ಬುಡಕಟ್ಟು ಹಳ್ಳಿಗಳ ಮಕ್ಕಳಿಗಾಗಿ ನರ್ಸರಿಯಿಂದ 8ನೇ ತರಗತಿಯವರೆಗೆ ಶಾಲೆಯನ್ನು ನಿರ್ಮಿಸುವ ಕನಸನ್ನು ಕಂಡಿದ್ದ ನಯೀಮ್, ಶಾಲೆಯನ್ನು ನಿರ್ಮಿಸುತ್ತಿದ್ದರು. ಅಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಮೈಲುಗಳಷ್ಟು ದೂರ ನಡೆಯಬೇಕಾದ ಪರಿಸ್ಥಿತಿಯಿತ್ತು.
ಅವರು ವಾಣಿಜ್ಯ ಭೂಮಿಯ ಬಳಕೆ ಬದಲಾವಣೆ (ಕಮರ್ಷಿಯಲ್ ಲ್ಯಾಂಡ್ ಡೈವರ್ಷನ್) ಅನುಮತಿ ಪಡೆದು, ಪಂಚಾಯತ್ನಿಂದ ಎನ್ಒಸಿ ಪಡೆದಿದ್ದರು. ಇದಲ್ಲದೆ ಡಿಸೆಂಬರ್ 30ರಂದು ಶಾಲಾ ಶಿಕ್ಷಣ ಇಲಾಖೆಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿ ಅಗತ್ಯವಿರುವ ಎಲ್ಲಾ ಭೂ ದಾಖಲೆಗಳನ್ನು ಕೂಡ ಸಲ್ಲಿಸಿದ್ದರು.
"ನಮ್ಮ ಗ್ರಾಮ ಅಭಿವೃದ್ಧಿಯಾಗಬೇಕು ಮತ್ತು ಕೆಲವು ಮಕ್ಕಳಾದರೂ ಓದಲು ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ನನ್ನ ಖಾಸಗಿ ಜಮೀನಿನಲ್ಲಿ ಶಾಲೆಯನ್ನು ನಿರ್ಮಿಸಲು ನಾನು ನಿರ್ಧರಿಸಿದ್ದೆ. ಆದರೆ ಇಲ್ಲಿ ನಾವು ತಪ್ಪು ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಗಳು ಆರೋಪಿಸಿದರು,” ಎಂದು ನಯೀಮ್ ಹೇಳಿದ್ದಾರೆ.
ಶಾಲಾ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಧ್ವಂಸಕ್ಕೆ ಮೂರು ದಿನ ಮುಂಚಿತವಾಗಿ ಆ ಪ್ರದೇಶದಲ್ಲಿ ಮದರಸಾ ನಿರ್ಮಾಣವಾಗುತ್ತಿದೆ ಎಂಬ ವದಂತಿಗಳು ಹರಿದಾಡಿದವು. ಇದು ಕೇವಲ ಮೂರು ಮುಸ್ಲಿಂ ಕುಟುಂಬಗಳಿರುವ ಗ್ರಾಮ. ಕಟ್ಟಡವೇ ಪೂರ್ಣವಾಗಿರಲಿಲ್ಲ. ಇಲ್ಲಿ ಮದರಸಾ ಕಾರ್ಯನಿರ್ವಹಿಸುವುದು ಹೇಗೆ ಸಾಧ್ಯ? ತರಗತಿಗಳೇ ಇರಲಿಲ್ಲ, ವಿದ್ಯಾರ್ಥಿಗಳೂ ಇರಲಿಲ್ಲ, ಎಂದು ನಯೀಮ್ ಹೇಳಿದ್ದಾರೆ.
ಜನವರಿ 11ರಂದು, ಅನುಮತಿ ಇಲ್ಲದಿರುವುದನ್ನು ಉಲ್ಲೇಖಿಸಿ, ಗ್ರಾಮ ಪಂಚಾಯತ್ ನಯೀಮ್ ಅವರಿಗೆ ಕಟ್ಟಡವನ್ನು ಕೆಡವುವಂತೆ ನೋಟಿಸ್ ನೀಡಿದೆ. ಅದಕ್ಕೆ ಅಧಿಕೃತವಾಗಿ ಉತ್ತರ ನೀಡಲು ಅವರು ಪಂಚಾಯತ್ ಕಚೇರಿಗೆ ಹೋದಾಗ ಅವರ ಅರ್ಜಿಯನ್ನು ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿ ಮತ್ತೆ ಬರುವಂತೆ ಸೂಚಿಸಿದ್ದಾರೆ.
ಜನವರಿ 13ರಂದು ನಯೀಮ್ ಮತ್ತು ಕೆಲವು ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಜಿಲ್ಲಾ ಕಚೇರಿಗೆ ತೆರಳಿದ್ದರು. ಆದರೆ ಅಧಿಕಾರಿಗಳು ಪೊಲೀಸ್ ಬಂದೋ ಬಸ್ತ್ನಲ್ಲಿ ಶಾಲಾ ಕಟ್ಟಡದ ಒಂದು ಭಾಗ ಮತ್ತು ಮುಂಭಾಗದ ಶೆಡ್ ನೆಲಸಮಗೊಳಿಸಿದ್ದಾರೆ.
ಅತಿಕ್ರಮಣ ಮತ್ತು ನಿಯಮ ಉಲ್ಲಂಘನೆ ಆರೋಪಿಸಿ ಗ್ರಾಮ ಪಂಚಾಯತ್ ದೂರು ದಾಖಲಿಸಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಪರಿಶೀಲನೆಯ ವೇಳೆ ಕಟ್ಟಡದ ಒಂದು ಭಾಗವನ್ನು ಅತಿಕ್ರಮಣ ಮಾಡಿ ನಿರ್ಮಿಸಿರುವುದು ಕಂಡು ಬಂದಿದೆ. ಆದ್ದರಿಂದ ಆ ಭಾಗವನ್ನು ತೆರವುಗೊಳಿಸಲಾಗಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಜಿತ್ ಮರಾವಿ ಹೇಳಿದ್ದಾರೆ.
ನಯೀಮ್ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. "ನನ್ನ ಬಳಿ ಪಂಚಾಯತ್ ನೀಡಿರುವ ಎನ್ಒಸಿ ಇತ್ತು. ನಾನು ಶಾಲೆಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ್ದೆ. ಕಾಗದಪತ್ರಗಳಲ್ಲಿ ಯಾವುದೇ ಲೋಪವಿದ್ದರೆ ದಂಡವನ್ನು ಪಾವತಿಸಲು ನಾನು ಸಿದ್ಧನಿದ್ದೆ" ಎಂದು ಹೇಳಿದ್ದಾರೆ.







