ಅಸ್ವಸ್ಥ ತಾಯಿಯನ್ನು ಮನೆಯಲ್ಲಿ ಕೂಡಿಹಾಕಿ ಅತ್ತೆ-ಮಾವನ ಜೊತೆ ಪುಣ್ಯಸ್ನಾನಕ್ಕೆ ಕುಂಭಕ್ಕೆ ತೆರಳಿದ ಮಗರಾಯ!

PC ; newindianexpress.com
ರಾಂಚಿ: ತನ್ನ 68ರ ಹರೆಯದ ಅನಾರೋಗ್ಯ ಪೀಡಿತ ತಾಯಿಯನ್ನು ಮನೆಯೊಳಗೆ ಲಾಕ್ ಮಾಡಿ ಮಗರಾಯ ಅತ್ತೆ-ಮಾವನೊಂದಿಗೆ ಕುಂಭಮೇಳಕ್ಕೆ ತೆರಳಿದ ಮನಕಲಕುವ ಘಟನೆ ಜಾರ್ಖಂಡ್ನ ರಾಮಗಡ ಜಿಲ್ಲೆಯ ಸಿರ್ಕಾ-ಅರ್ಗಡಾ ಎಂಬಲ್ಲಿ ನಡೆದಿದೆ.
ಸಿಸಿಎಲ್ ಕ್ವಾರ್ಟರ್ಸ್ಲ್ಲಿಯ ಮನೆಯಲ್ಲಿ ಬಂದಿಯಾಗಿದ್ದ ವೃದ್ಧ ಮಹಿಳೆ ನಾಲ್ಕು ದಿನಗಳ ಬಳಿಕ ಬುಧವಾರ ತೆವಳಿಕೊಂಡು ಮುಖ್ಯ ದ್ವಾರದ ಬಳಿ ಬಂದು ನೆರವಿಗಾಗಿ ಒಳಗಿನಿಂದ ಬಾಗಿಲು ಬಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಒಳಗಿನಿಂದ ಯಾರೋ ಬಾಗಿಲು ಬಡಿಯುತ್ತಿದ್ದ ಶಬ್ದ ಕೇಳಿಬಂದಿತ್ತು. ಬಾಗಿಲಿನ ರಂಧ್ರದ ಮೂಲಕ ಇಣುಕಿ ನೋಡಿದಾಗ ಸಂಜು ದೇವಿ ನೆರವಿಗಾಗಿ ಕೂಗುತ್ತಿದ್ದುದು ಕಂಡು ಬಂದಿತ್ತು ಎಂದು ನೆರೆಮನೆಯ ನಿವಾಸಿ ತಿಳಿಸಿದರು.
ತಕ್ಷಣ ಆತ ಇತರರಿಗೆ ಮಾಹಿತಿ ನೀಡಿದ್ದು, ಎಲ್ಲರೂ ಸೇರಿ ಬೀಗವನ್ನು ಒಡೆದು ಮಹಿಳೆಯನ್ನು ರಕ್ಷಿಸಿದ್ದರು. ಸಂಜು ದೇವಿ ಹಸಿವು ಮತ್ತು ನಿಶ್ಶಕ್ತಿಯಿಂದ ಬಳಲಿದ್ದಳು.
‘ಸಂಜು ದೇವಿಯ ಏಕೈಕ ಪುತ್ರ ಅಖಿಲೇಶ ಪ್ರಜಾಪತಿ ಸೆಂಟ್ರಲ್ ಕೋಲ್ಫೀಲ್ಡ್ನಲ್ಲಿ ಶಾವೆಲ್ ಆಪರೇಟರ್ ಆಗಿದ್ದು, ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ಪತ್ನಿ ಸೋನಿ,ಮಕ್ಕಳು ಮತ್ತು ಅತ್ತೆ-ಮಾವನ ಜೊತೆ ಪ್ರಯಾಗರಾಜ್ಗೆ ತೆರಳುವ ಮುನ್ನ ತಾಯಿಯನ್ನು ಮನೆಯಲ್ಲಿ ಕೂಡಿಹಾಕಿದ್ದ. ಸಂಜು ದೇವಿಯ ಸ್ಥಿತಿ ನೋಡಿ ನಮಗೆ ಆಘಾತವಾಗಿತ್ತು. ಆಕೆ ಹಸಿದಿದ್ದಳು, ನಿಶ್ಶಕ್ತಿಯಿಂದ ಬಳಲಿದ್ದಳು, ಬಲಗಾಲು ಮತ್ತು ಕೈಯಲ್ಲಿ ಗಂಭೀರ ಗಾಯಗಳಿದ್ದವು’ ಎಂದು ತಿಳಿಸಿದ ಸಾಮಾಜಿಕ ಕಾರ್ಯಕರ್ತ ರಂಜಿತ್ ಪಾಸ್ವಾನ್,ಸ್ವಂತ ಮಗನೇ ಆಕೆಗೆ ಹೀಗೆ ಮಾಡಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಮಾಹಿತಿ ತಿಳಿದು ಸೋದರಮಾವನ ಜೊತೆಗೆ ಸ್ಥಳಕ್ಕೆ ಧಾವಿಸಿದ ಸಂಜು ದೇವಿಯ ಪುತ್ರಿ ಚಾಂದನಿ ಕುಮಾರಿ ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದರು. ‘ನನ್ನ ತಮ್ಮ ಯಾವಾಗಲೂ ಸ್ವಾರ್ಥಿ, ಆದರೆ ಆತ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತಾನೆ ಎಂದು ನಾನೆಂದಿಗೂ ಭಾವಿಸಿರಲಿಲ್ಲ’ ಎಂದ ಆಕೆ, ಆತನ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದರು.
ಸಂಜು ದೇವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.







