ಮಹಾ ಕುಂಭಮೇಳ | ದಾರಿ ತಪ್ಪಿಸುವ ತುಣುಕುಗಳನ್ನು ಹಂಚಿಕೊಂಡ ಆರೋಪ: 140 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪ್ರಕರಣ ದಾಖಲು

ಮಹಾ ಕುಂಭಮೇಳ | PC : PTI
ಪ್ರಯಾಗ್ ರಾಜ್: ಮಹಾ ಕುಂಭಮೇಳದ ಕುರಿತು ದಾರಿ ತಪ್ಪಿಸುವ ತುಣುಕುಗಳನ್ನು ಹಂಚಿಕೊಂಡ ಆರೋಪದ ಮೇಲೆ 140 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ 13 ಎಫ್ಐಆರ್ ಗಳನ್ನು ದಾಖಲಿಸಿಕೊಳ್ಳ ಲಾಗಿದೆ ಎಂದು ಉಪ ಪೊಲೀಸ್ ಮಹಾ ನಿರೀಕ್ಷಕ ವೈಭವ್ ಕೃಷ್ಣ ಹೇಳಿದ್ದಾರೆ.
“ದಾರಿ ತಪ್ಪಿಸುವ ತುಣುಕುಗಳನ್ನು ಹಂಚಿಕೊಂಡಿರುವ 140 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ 13 ಎಫ್ಐಆರ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಇಂತಹ ತಪ್ಪು ಮಾಹಿತಿಗಳನ್ನು ಹರಡುವ ಪ್ರಯತ್ನದ ಹೊರತಾಗಿಯೂ ಮಹಾ ಕುಂಭಮೇಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ಬೆಳವಣಿಗೆಯೊಂದರಲ್ಲಿ, ಇದಕ್ಕೂ ಮುನ್ನ, ರೈಲಿಗೆ ಹೊತ್ತಿಕೊಂಡಿದ್ದ ಬೆಂಕಿಯ ಕುರಿತು ಸುಳ್ಳು ಮಾಹಿತಿಗಳನ್ನು ಹರಡಿದ ಆರೋಪದ ಮೇಲೆ 34 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು. ಫೆಬ್ರವರಿ 14ರಂದು ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ 300 ಮಂದಿ ಮೃತಪಟ್ಟಿದ್ದಾರೆ ಎಂದು ಆ ವೈರಲ್ ವಿಡಿಯೊದಲ್ಲಿ ತಪ್ಪಾಗಿ ಆರೋಪಿಸಲಾಗಿತ್ತು.
ಆದರೆ, ಆ ದೃಶ್ಯಾವಳಿಯು 2022ರಲ್ಲಿ ಬಾಂಗ್ಲಾದೇಶದ ಢಾಕಾ-ಸಿಲ್ಹೆತ್ ರೈಲ್ವೆ ಮಾರ್ಗದಲ್ಲಿ ಪರ್ಬತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದ್ದ ಅಗ್ನಿ ಅವಘಡ ಘಟನೆಗೆ ಸಂಬಂಧಿಸಿದ್ದು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು.







