ಮಹಾ ಕುಂಭಮೇಳದಲ್ಲಿ ಕಾಲ್ತುಳಿತ | ಪಿತೂರಿ ಆಯಾಮದಲ್ಲಿ ತನಿಖೆ: 16 ಸಾವಿರ ಮೊಬೈಲ್ ಸಂಖ್ಯೆಗಳನ್ನು ವಿಶ್ಲೇಷಿಸುತ್ತಿರುವ ಉತ್ತರ ಪ್ರದೇಶ ಪೊಲೀಸರು

PC : PTI
ಲಕ್ನೊ: ಸಂಗಮ ಬಳಿಯ ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ 30 ಮಂದಿ ಭಕ್ತರು ಮೃತಪಟ್ಟು, 60 ಮಂದಿ ಗಾಯಗೊಂಡಿರುವುದು ಪಿತೂರಿಯ ಭಾಗವಾಗಿರಬಹುದು ಎಂಬ ಆಯಾಮದಲ್ಲಿ ಉತ್ತರ ಪ್ರದೇಶ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬುಧವಾರ ಮೌನಿ ಅಮಾವಾಸ್ಯೆಯ ಪ್ರಯುಕ್ತ ನಡೆದ ಅಮೃತ ಸ್ನಾನದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿತ್ತು.
ಮೂಲಗಳ ಪ್ರಕಾರ, ಉತ್ತರ ಪ್ರದೇಶ ವಿಶೇಷ ತನಿಖಾ ದಳದ ಪೊಲೀಸರು ಮಧ್ಯರಾತ್ರಿ ಸಂಭವಿಸಿದ ಕಾಲ್ತುಳಿತದ ಸಂದರ್ಭದಲ್ಲಿ ಸಕ್ರಿಯವಾಗಿದ್ದ ಸಾವಿರಾರು ಮೊಬೈಲ್ ಸಂಖ್ಯೆಗಳ ದತ್ತಾಂಶವನ್ನು ವಿಶ್ಲೇಷಿಸುತ್ತಿದ್ದಾರೆ.
ಸುಮಾರು 16 ಸಾವಿರ ಮೊಬೈಲ್ ಸಂಖ್ಯೆಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ನಡೆದ ನಂತರ, ಈ ಪೈಕಿ ಹಲವಾರು ಸಂಖ್ಯೆಗಳು ಸ್ವಿಚ್ಡ್ ಆಫ್ ಆಗಿವೆ.
ನಾವು ಪಿತೂರಿಯ ಆಯಾಮದಿಂದಲೂ ಕಾಲ್ತುಳಿತವನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾಲ್ತುಳಿತ ಸಂಭವಿಸಿದ ರಾತ್ರಿ ಯುವಕರ ಗುಂಪೊಂದು ಭಕ್ತರನ್ನು ಅವರೆದುರಿಗೆ ಉದ್ದೇಶಪೂರ್ವಕವಾಗಿ ತಳ್ಳಿದ್ದರಿಂದ ಕಾಲ್ತುಳಿತ ಸಂಭವಿಸಿತು ಎಂದು ಹೇಳಿದ್ದು, ಪೊಲೀಸರು ಆ ಯುವಕರ ಗುಂಪಿಗಾಗಿ ಶೋಧ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
“ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುತ್ತಿದೆ. ಮುಖ ಚಹರೆ ಗುರುತು ಪತ್ತೆ ತಂತ್ರಾಂಶದ ಮೂಲಕ ನಾವು ಮುಖಗಳನ್ನು ಗುರುತು ಹಿಡಿಯಲು ಪ್ರಯತ್ನಿಸುತ್ತಿದ್ದೇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾ ಕುಂಭಮೇಳದಲ್ಲಿ ಬಳೆಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವ ಸಣ್ಣ ವರ್ತಕರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. “ನಮ್ಮ ಮುಂದಿರುವ ಗುರಿಯೆಂದರೆ, ಸೋಮವಾರ ಬಸಂತ್ ಪಂಚಮಿ ಪ್ರಯುಕ್ತ ನಡೆಯಲಿರುವ ಮೂರನೆ ಅಮೃತ ಸ್ನಾನವು ಯಾವುದೇ ಘಟನೆ ನಡೆಯದಂತೆ ಮುಗಿಯುವುದನ್ನು ಖಾತರಿ ಪಡಿಸುವುದಾಗಿದೆ. ಇದಾದ ನಂತರ ತನಿಖೆ ಚುರುಕು ಪಡೆಯಲಿದೆ” ಎಂದೂ ಅವರು ಹೇಳಿದ್ದಾರೆ.







