ಮಹಾದೇವ ಬೆಟ್ಟಿಂಗ್ ಆ್ಯಪ್ ಪ್ರಕರಣ | EDಯಿಂದ 21.45 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

Photo Credit : PTI
ಹೊಸದಿಲ್ಲಿ, ಜ.15: ಮಹಾದೇವ ಬೆಟ್ಟಿಂಗ್ ಆ್ಯಪ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ (ED)ವು 21.45 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳಿಗೆ ಮುಟ್ಟುಗೋಲು ಹಾಕಿರುವುದಾಗಿ ರವಿವಾರ ವರದಿಯಾಗಿದೆ. 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಲಾಗಿದೆ.
ಅಕ್ರಮ ಬೆಟ್ಟಿಂಗ್ ದಂಧೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಹರಡಿರುವ ಅಕ್ರಮ ಹಣವರ್ಗಾವಣೆ ಚಟುವಟಿಕೆಗಳನ್ನು ಮಟ್ಟಹಾಕುವ ಪ್ರಯತ್ನಗಳ ಭಾಗವಾಗಿ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ. ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಇತರ ಪ್ರಾಂತಗಳಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಬೆಟ್ಟಿಂಗ್ ಜಾಲಕ್ಕೆ ಸಂಬಂಧಿಸಿದಂತೆ ಈ ತನಿಖೆ ನಡೆಯುತ್ತಿದೆ.
ಮಹಾದೇವ ಬೆಟ್ಟಿಂಗ್ ಸಂಸ್ಥೆ ಪ್ರವರ್ತಕರು, ಸಮಿತಿಯ ನಿರ್ವಾಹಕರು ಹಾಗೂ ಏಜೆಂಟರ ಸಂಕೀರ್ಣ ಜಾಲದ ಮೂಲಕ ಕಾರ್ಯಾಚರಿಸುತ್ತಿತ್ತು. ಡಿಜಿಟಲ್ ಪ್ಲಾಟ್ಫಾರಂಗಳನ್ನು ಬಳಸಿಕೊಂಡು ಅಕ್ರಮ ಬೆಟ್ಟಿಂಗ್ ದಂಧೆಯನ್ನು ನಡೆಸುತ್ತಿದ್ದುದಾಗಿ ಜಾರಿ ನಿರ್ದೇಶನಾಲಯದ ತನಿಖೆಯಿಂದ ತಿಳಿದುಬಂದಿದೆ.
ಬೋಗಸ್ ಕಂಪನಿಗಳು, ಬೇನಾಮಿ ಖಾತೆಗಳು ಹಾಗೂ ಅಕ್ರಮ ಹಣಕಾಸು ವರ್ಗಾವಣೆ ಸೇರಿದಂತೆ ವಿವಿಧ ವಿಧಾನಗಳ ಮೂಲಕ ನಿಧಿಗಳನ್ನು ಸಂಗ್ರಹಿಸುತ್ತಿತ್ತೆನ್ನಲಾಗಿದೆ.
ಬೆಟ್ಟಿಂಗ್ ದಂಧೆಯಿಂದ ಲಭಿಸಿದ ಲಾಭಾಂಶದ ಪೈಕಿ ಶೇ.70ರಿಂದ ಶೇ.75ರಷ್ಟು ಹಣವು ಸ್ಕೀಮ್ನ ಮುಖ್ಯ ಪ್ರವರ್ತಕರಿಗೆ ಸೇರಿದ್ದು, ಉಳಿದ ಹಣವನ್ನು ಏಜೆಂಟರಿಗೆ ವಿತರಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮುಟ್ಟುಗೋಲು ಹಾಕಿದ ಆಸ್ತಿಗಳು ಬೆಟ್ಟಿಂಗ್ ಕಾರ್ಯಾಚರಣೆಗಳನ್ನು ನಿರ್ವಹಿಸುವ, ಖಾತೆಗಳನ್ನು ನಿಭಾಯಿಸುವ ಹಾಗೂ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಹಾದೇವ ಪ್ಲಾಟ್ಫಾರಂ ಅನ್ನು ಪ್ರಚಾರ ಮಾಡುತ್ತಿದ್ದವರಿಗೆ ಸೇರಿದವುಗಳಾಗಿವೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.







