ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ | ಮಾಜಿ ಸಿಎಂ ಭೂಪೇಶ್ ಬಾಘೇಲ್ ನಿವಾಸದ ಮೇಲೆ ಸಿಬಿಐ ದಾಳಿ

ಭೂಪೇಶ್ ಬಾಘೇಲ್ | PC : PTI
ಹೊಸದಿಲ್ಲಿ: ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಚತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ನಿವಾಸಗಳ ಮೇಲೆ ಸಿಬಿಐ ಬುಧವಾರ ದಾಳಿ ನಡೆಸಿದೆ.
ದಿಲ್ಲಿಯಲ್ಲಿರುವ ಕಾಂಗ್ರೆಸ್ ನ ಕೇಂದ್ರ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಭೂಪೇಶ್ ಬಾಘೇಲ್ ಅವರ ರಾಯ್ಪುರ ಹಾಗೂ ಭಿಲಾಯಿಯಲ್ಲಿರುವ ನಿವಾಸಗಳಿಗೆ ಸಿಬಿಐ ಅದಿಕಾರಿಗಳು ತಲುಪಿದ್ದಾರೆ ಎಂದು ಬಾಘೇಲ್ ಅವರ ಕಚೇರಿಯ ಟ್ವೀಟ್ ಹೇಳಿದೆ.
ಮಹಾದೇವ್ ಬೆಟ್ಟಿಂಗ್ ಆ್ಯಪ್ಗೆ ಸಂಬಂಧಿಸಿ ರಾಜ್ಯಾದ್ಯಂತ ಹಲವು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 70 ಪ್ರಕರಣಗಳ ತನಿಖೆ ನಡೆಸಲು ಮಧ್ಯಪ್ರದೇಶ ಸರಕಾರ ಕಳೆದ ವರ್ಷ ಸಿಬಿಐಗೆ ಅನುಮತಿ ನೀಡಿತ್ತು.
‘‘ಈಗ ಸಿಬಿಐ ಬಂದಿದೆ. ಅಹ್ಮದಾಬಾದ್ (ಗುಜರಾತ್)ನಲ್ಲಿ ಎಪ್ರಿಲ್ 8 ಹಾಗೂ 9ರಂದು ಆಯೋಜಿಸಿರುವ ಎಐಸಿಸಿಯ ಸಭೆಗೆ ಕರಡು ಸಮಿತಿ ರೂಪಿಸುವ ಸಭೆಯಲ್ಲಿ ಪಾಲ್ಗೊಳ್ಳಲು ಭೂಪೇಶ್ ಬಾಘೇಲ್ ಅವರು ಇಂದು ದಿಲ್ಲಿಗೆ ತೆರಳಲಿದ್ದರು. ಅದಕ್ಕಿಂತ ಮುನ್ನ ಸಿಬಿಐ ಅವರ ರಾಯಪುರ ಹಾಗೂ ಭಿಲಾಯಿಯ ನಿವಾಸಗಳಿಗೆ ತಲುಪಿದೆ’’ ಎಂದು ಎಕ್ಸ್ನ ಪೋಸ್ಟ್ ಹೇಳಿದೆ.
ಬಾಘೇಲ್ ವಿರುದ್ಧದ ಕ್ರಮಕ್ಕೆ ಬಿಜೆಪಿಯನ್ನು ತರಾಟೆಗೆ ತಗೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಸಂವಹನ ಘಟಕದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ, ಇದಕ್ಕೆ ಕಾಂಗ್ರೆಸ್ ಆಗಲಿ, ಪಕ್ಷದ ಹಿರಿಯ ನಾಯಕರಾಗಲಿ ಹೆದರುವುದಿಲ್ಲ ಎಂದಿದ್ದಾರೆ.
‘‘ಭೂಪೇಶ್ ಬಾಘೇಲ್ ಅವರು ಪಕ್ಷದ ಪಂಜಾಬ್ ನ ಉಸ್ತುವಾರಿ ಆದ ಬಳಿಕ ಬಿಜೆಪಿಗೆ ಭೀತಿ ಉಂಟಾಗಿದೆ. ಮೊದಲು ಅವರ ನಿವಾಸಕ್ಕೆ ಜ್ಯಾರಿ ನಿರ್ದೇಶನಾಲಯವನ್ನು ಕಳುಹಿಸಿತ್ತು. ಈಗ ಸಿಬಿಐಯನ್ನು ಕಳುಹಿಸಿದೆ. ಇದು ಬಿಜೆಪಿಯ ಭೀತಿಯನ್ನು ತೋರಿಸುತ್ತದೆ. ರಾಜಕೀಯವಾಗಿ ಹೋರಾಡಲು ವಿಫಲವಾದ ಸಂದರ್ಭ ಬಿಜೆಪಿ ತನ್ನ ವಿರೋಧಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತದೆ’’ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ದಮನಕಾರಿ ರಾಜಕೀಯದ ಬಗ್ಗೆ ದೇಶ ಹಾಗೂ ರಾಜ್ಯದ ಜನರಿಗೆ ಅರಿವಿದೆ ಎಂದು ಸುಶೀಲ್ ಆನಂದ್ ಶುಕ್ಲಾ ತಿಳಿಸಿದ್ದಾರೆ.







