ಮಹಾದೇವ ಬೆಟ್ಟಿಂಗ್ ಆ್ಯಪ್ ಹಗರಣ: ಬಾಲಿವುಡ್ ನಟ ಸಾಹಿಲ್ ಖಾನ್ ಹೇಳಿಕೆ ದಾಖಲಿಸಿದ ಮುಂಬೈ ಕ್ರೈಂ ಬ್ರಾಂಚ್
ಸಾಹಿಲ್ ಖಾನ್ | Photo: X
ಮುಂಬೈ: ಮಹಾದೇವ ಬೆಟ್ಟಿಂಗ್ ಆ್ಯಪ್ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಶುಕ್ರವಾರ ಬಾಲಿವುಡ್ ನಟ ಸಾಹಿಲ್ ಖಾನ್ ಹಾಗೂ ಇತರ ಮೂವರನ್ನು ಕರೆಸಿಕೊಂಡು ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ಮಹಾದೇವ ಬೆಟ್ಟಿಂಗ್ ಆ್ಯಪ್ ನ ಪ್ರವರ್ತಕರು ಹಾಗೂ ರಾಜ್ಯದ ಕೆಲವು ನಿರ್ದಿಷ್ಟ ಹಣಕಾಸು ಹಾಗೂ ರಿಯಲ್ ಎಸ್ಟೇಟ್ ಸಂಸ್ಥೆಗಳ ನಡುವೆ ಏರ್ಪಟ್ಟ ಅಕ್ರಮ ವಹಿವಾಟುಗಳ ವಿರುದ್ಧ ತನಿಖೆ ನಡೆಸಲು ಮುಂಬೈ ಪೊಲೀಸರು ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದಾರೆ.
ಮುಂಬೈ ಕ್ರೈಂಬ್ರಾಂಚ್ ಪೊಲೀಸರು ಸಾಹಿಲ್ ಖಾನ್, ಅವರ ಸಹೋದರ ಸ್ಯಾಮ್ ಖಾನ್, ಹಿತೇಶ್ ಕುಶಲಾನಿ ಹಾಗೂ ಇನ್ನೋರ್ವ ಆರೋಪಿಗೆ ಸಮನ್ಸ್ ನೀಡಿದ್ದರು.
ಮಹಾದೇವ ಬೆಟ್ಟಿಂಗ್ ಆ್ಯಪ್ ಹಗರಣದಲ್ಲಿ 15 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಅಕ್ರಮ ವಹಿವಾಟು ನಡೆದಿದೆ ಎಂದು ಎಸ್ ಐ ಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಹಿಲ್ ಖಾನ್ ಹಾಗೂ ಇತರ 31 ಮಂದಿಯ ವಿರುದ್ಧ ತನಿಖೆ ನಡೆಯುತ್ತಿದೆ. ಅವರ ಬ್ಯಾಂಕ್ ಖಾತೆಗಳು, ಮೊಬೈಲ್ ಪೋನ್ ಗಳು, ಲ್ಯಾಪ್ಟಾಪ್ ಗಳು ಹಾಗೂ ಎಲ್ಲಾ ರೀತಿಯ ತಾಂತ್ರಿಕ ಸಾಮಾಗ್ರಿಗಳನ್ನು ತನಿಖಾ ತಂಡವು ಪರಿಶೀಲಿಸುತ್ತಿದೆ.