ಮಹಾರಾಷ್ಟ್ರ | ಶಾಲೆಗೆ ತಡವಾಗಿ ಬಂದಿದ್ದಕ್ಕೆ 100 ಭಸ್ಕಿ ಹೊಡೆಯುವ ಶಿಕ್ಷೆ: ಕಠಿಣ ಶಿಕ್ಷೆಯಿಂದ 13 ವರ್ಷದ ಬಾಲಕಿ ಮೃತ್ಯು!

ಸಾಂದರ್ಭಿಕ ಚಿತ್ರ
ಪಾಲ್ಘರ್ (ಮಹಾರಾಷ್ಟ್ರ): ಶಾಲೆಗೆ ತಡವಾಗಿ ಬಂದಿದ್ದಕ್ಕೆ ನೀಡಿದ 100 ಭಸ್ಕಿ ಹೊಡೆಯುವ ಶಿಕ್ಷೆಯು 13 ವರ್ಷದ ಬಾಲಕಿಯೊಬ್ಬಳನ್ನು ಬಲಿ ಪಡೆದಿರುವ ಆಘಾತಕಾರಿ ಘಟನೆ ಪಾಲ್ಘರ್ ಜಿಲ್ಲೆಯ ವಸಾಯಿ ತಾಲ್ಲೂಕಿನ ಶಾಲೆಯೊಂದರಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಅಂಶಿಕಾ ಗೌಡ್ (13) ಎಂದು ಗುರುತಿಸಲಾಗಿದ್ದು, ಆಕೆ ವಸಾಯಿ ಪ್ರದೇಶದಲ್ಲಿರುವ ಸಾತಿವಾಲಿಯಲ್ಲಿನ ಶ್ರೀ ಹನುಮಂತ್ ವಿದ್ಯಾಮಂದಿರ್ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದಳು.
ಶಾಲೆಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷಕರಿಂದ 100 ಭಸ್ಕಿ ಹೊಡೆಯುವ ಕಠಿಣ ಶಿಕ್ಷೆಗೆ ಬಾಲಕಿ ಗುರಿಯಾಗಿದ್ದಾಳೆ. ಈ ಶಿಕ್ಷೆಯ ಬೆನ್ನಿಗೇ ಆಕೆಯ ಬೆನ್ನಿನ ಕೆಳ ಭಾಗದಲ್ಲಿ ಗಂಭೀರ ಸ್ವರೂಪದ ನೋವು ಕಾಣಿಸಿಕೊಂಡಿದೆ. ಮನೆಗೆ ಮರಳಿದ ಬಳಿಕ ಆಕೆಯ ಆರೋಗ್ಯ ಕ್ಷೀಣಿಸುತ್ತಲೇ ಸಾಗಿದ್ದು, ಆಕೆಯನ್ನು ನಲಸೋಪಾರದಲ್ಲಿನ ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಆದರೆ, ಆಕೆಯ ಆರೋಗ್ಯ ಸ್ಥಿತಿ ಮತ್ತಷ್ಟು ವಿಷಮಿಸಿದ ಬಳಿಕ, ಆಕೆಯನ್ನು ಮುಂಬೈನ ಸರ್ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದ ಆಕೆ ಮೃತಪಟ್ಟಿದ್ದಾಳೆ. ಈ ಘಟನೆ ವಸಾಯಿ ಪ್ರದೇಶದಲ್ಲಿನ ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಾಲಕಿಯ ಕುಟುಂಬದ ಸದಸ್ಯರೊಬ್ಬರು, “ಶಿಕ್ಷೆಯ ನಂತರ ಆಕೆ ತೀವ್ರ ಸ್ವರೂಪದ ಬೆನ್ನು ಮತ್ತು ಕುತ್ತಿಗೆ ನೋವಿಗೆ ಗುರಿಯಾಗಿದ್ದಳು ಹಾಗೂ ಆಕೆಗೆ ಮೇಲೇಳಲೂ ಸಾಧ್ಯೆವಾಗುತ್ತಿರಲಿಲ್ಲ” ಎಂದು ಆರೋಪಿಸಿದ್ದಾರೆ.
ಈ ಸಂಬಂಧ ವಾಲಿವ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ, ಅಂಶಿಕಾ ಸಾವಿನ ಕುರಿತು ತನಿಖೆ ನಡೆಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ್ ಗಲಂಗೆ ಘೋಷಿಸಿದ್ದಾರೆ.
ಈ ಘಟನೆಯ ವಿರುದ್ಧ ಪ್ರತಿಭಟನೆ ನಡೆಸಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಹಾಗೂ ಎನ್ಸಿಪಿ(ಎಸ್ಪಿ)ಯ ಕಾರ್ಯಕರ್ತರು, ಶಾಲೆ ಮತ್ತು ಅದರ ಆಡಳಿತ ಮಂಡಳಿ ಹಾಗೂ ಈ ಘಟನೆಯಲ್ಲಿ ಭಾಗಿಯಾಗಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮರಣೋತ್ತರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ.







