ಮಹಾರಾಷ್ಟ್ರ: ಸರಕಾರಿ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 12 ರೋಗಿಗಳು, 12 ನವಜಾತ ಶಿಶುಗಳು ಸಾವು
ಹಾವು ಕಡಿತಕ್ಕೊಳಗಾದವರೇ ಹೆಚ್ಚು!

ಹೊಸದಿಲ್ಲಿ: ಮಹಾರಾಷ್ಟ್ರ ನಾಂದೇಡ್ನ ಸರಕಾರಿ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 12 ನವಜಾತ ಶಿಶುಗಳು ಹಾಗೂ 12 ರೋಗಿಗಳು ಮೃತಪಟ್ಟಿದ್ದಾರೆ ಎಂದು ನಾದೇಂಡ್ ನ ಶಂಕರರಾವ್ ಚವ್ಹಾಣ್ ಸರಕಾರಿ ಆಸ್ಪತ್ರೆಯ ಡೀನ್ ತಿಳಿಸಿದ್ದಾರೆ.
‘‘ಕಳೆದ 24 ಗಂಟೆಗಳಲ್ಲಿ 6 ಹೆಣ್ಣು ಹಾಗೂ 6ಗಂಡು ಶಿಶು ಸಾವನ್ನಪ್ಪಿವೆ. 12 ಮಂದಿ ವಿವಿಧ ಖಾಯಿಲೆಗಳಿಂದ, ಹೆಚ್ಚಾಗಿ ಹಾವು ಕಡಿತಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಂದರ್ಭ ಸಾವನ್ನಪ್ಪಿದ್ದಾರೆ. ಔಷಧ ಹಾಗೂ ಸಿಬ್ಬಂದಿ ಕೊರತೆ ಈ ಸಾವಿಗೆ ಕಾರಣ. ಹಲವು ಸಿಬ್ಬಂದಿ ವರ್ಗಾವಣೆಯಾದ ಬಳಿಕ ನಾವು ಈ ಸಮಸ್ಯೆ ಎದುರಿಸುತ್ತಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.
‘‘ನಮ್ಮದು ತೃತೀಯ ಹಂತದ ಪಾಲನಾ ಕೇಂದ್ರ. 70ರಿಂದ 80 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ಏಕೈಕ ಕೇಂದ್ರ ಇದಾಗಿದೆ. ಆದುದರಿಂದ ದುರ್ಗಮ ಪ್ರದೇಶದಿಂದ ಜನರು ಇಲ್ಲಿಗೆ ಬರುತ್ತಾರೆ. ಕೆಲವೊಂದು ದಿನ ಇಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದು ಬಜೆಟ್ ಸಮಸ್ಯೆಯನ್ನು ಸೃಷ್ಟಿಸುತ್ತದೆ’’ ಎಂದು ಅವರು ಹೇಳಿದ್ದಾರೆ.
‘ಇಲ್ಲಿ ಹಾಫ್ಕಿನ್ ಸಂಸ್ಥೆ ಇದೆ. ನಾವು ಇಲ್ಲಿಂದ ಔಷಧಗಳನ್ನು ಖರೀದಿಸಬೇಕಿತ್ತು. ಅದು ಸಾಧ್ಯವಾಗುತ್ತಿಲ್ಲ. ಆದರೆ, ನಾವು ಸ್ಥಳೀಯವಾಗಿ ಔಷಧ ಖರೀದಿಸಿ ರೋಗಿಗಳಿಗೆ ನೀಡುತ್ತಿದ್ದೇವೆ’’ ಎಂದು ಅವರು ಹೇಳಿದ್ದಾರೆ.
ಈ ಸಾವುಗಳನ್ನು ದುರಾದೃಷ್ಟಕರ ಎಂದು ಮುಂಬೈಯಲ್ಲಿರುವ ಹೇಳಿರುವ ಮುಖ್ಯಮಂತ್ರಿ ಏಕನಾಥ್ ಶಿಂದೆ, ಆಸ್ಪತ್ರೆಯಲ್ಲಿ ಏನು ನಡೆದಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಕೋರಲಾಗುವುದು ಹಾಗೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಏಕನಾಥ ಶಿಂಧೆ ನೇತೃತ್ವದ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷ ತ್ರಿವಳಿ ಎಂಜಿನ್ ಸರಕಾರ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದೆ.







