ಮಹಾರಾಷ್ಟ್ರ:ಶಂಕಿತ ಗುಲಿಯಾನ್-ಬಾರಿ ಸಿಂಡ್ರೋಮ್ ಸೋಂಕಿಗೊಳಗಾಗಿದ್ದ ವ್ಯಕ್ತಿ ಮೃತ್ಯು

ಸಾಂದರ್ಭಿಕ ಚಿತ್ರ | PC : freepik.com
ಪುಣೆ: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಗುಲಿಯಾನ್-ಬಾರಿ ಸಿಂಡ್ರೋಮ್(ಜಿಬಿಎಸ್) ಸೋಂಕಿಗೆ ತುತ್ತಾಗಿದ್ದಾನೆ ಎಂದು ಶಂಕಿಸಲಾಗಿದ್ದ ವ್ಯಕ್ತಿ ಮೃತಪಟ್ಟಿದ್ದು,ರಾಜ್ಯದಲ್ಲಿ ಈ ನರ ಅಸ್ವಸ್ಥತೆಯ ಪ್ರಕರಣಗಳ ಸಂಖ್ಯೆ ನೂರು ದಾಟಿದೆ ಎಂದು ಆರೋಗ್ಯಾಧಿಕಾರಿಗಳು ಸೋಮವಾರ ತಿಳಿಸಿದರು.
ಇದು ಬಹುಶಃ ಮಹಾರಾಷ್ಟ್ರದಲ್ಲಿ ಶಂಕಿತ ಜಿಬಿಎಸ್ನಿಂದ ಸಂಭವಿಸಿದ ಮೊದಲ ಸಾವು ಆಗಿದೆ. ಸೋಲಾಪುರ ಮೂಲದ 40 ವರ್ಷ ಪ್ರಾಯದ ವ್ಯಕ್ತಿ ಪುಣೆಗೆ ಭೇಟಿ ನೀಡಿದ್ದಾಗ ಈ ರೋಗಕ್ಕೆ ತುತ್ತಾಗಿರುವ ಶಂಕೆಯಿದೆ ಎಂದು ಅಧಿಕಾರಿಗಳು ಹೇಳಿದರು.
ಉಸಿರಾಟದ ತೊಂದರೆ,ಕಾಲುಗಳಲ್ಲಿ ನಿಶ್ಶಕ್ತಿ ಮತ್ತು ಅತಿಸಾರದಂತಹ ಲಕ್ಷಣಗಳಿಂದ ಬಳಲುತ್ತಿದ್ದ ರೋಗಿಯನ್ನು ಜ.18ರಂದು ಸೋಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ರವಿವಾರ ಮೃತಪಟ್ಟಿದ್ದಾರೆ ಎಂದು ಸೋಲಾಪುರ ಸರಕಾರಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಂಜೀವ ಠಾಕೂರ್ ತಿಳಿಸಿದರು. ಅವರ ಸಾವಿನ ಬಳಿಕ ಪ್ರಕರಣವನ್ನು ಸೋಲಾಪುರ ಸರಕಾರಿ ಆಸ್ಪತ್ರೆಗೆ ಉಲ್ಲೇಖಿಸಲಾಗಿತ್ತು.
ಸಾವಿನ ನಿಖರವಾದ ಕಾರಣವನ್ನು ತಿಳಿದುಕೊಳ್ಳಲು ತಾವು ಕ್ಲಿನಿಕಲ್ ಶವಪರೀಕ್ಷೆಯನ್ನು ನಡೆಸಿದ್ದು,ರೋಗಿ ಜಿಬಿಎಸ್ ಸೋಂಕಿಗೆ ತುತ್ತಾಗಿದ್ದರು ಎನ್ನುವುದನ್ನು ಪ್ರಾಥಮಿಕ ವರದಿಯು ಸೂಚಿಸಿದೆ. ಮೃತರ ರಕ್ತದ ಸ್ಯಾಂಪಲ್ಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಠಾಕೂರ್ ತಿಳಿಸಿದರು.
ಇದಕ್ಕೂ ಮುನ್ನ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೋರ್ವರು,68 ಪುರುಷರು ಮತ್ತು 33 ಮಹಿಳೆಯರು ಸೇರಿದಂತೆ ಪುಣೆಯಲ್ಲಿ ಒಟ್ಟು ಜಿಬಿಎಸ್ ಪ್ರಕರಣಗಳ ಸಂಖ್ಯೆ ರವಿವಾರ 101ಕ್ಕೇರಿದೆ. ಈ ಪೈಕಿ 16 ರೋಗಿಗಳಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಸೋಲಾಪುರದಲ್ಲಿ ಒಂದು ಶಂಕಿತ ಸಾವು ವರದಿಯಾಗಿದೆ ಎಂದು ತಿಳಿಸಿದ್ದರು.
ಜಿಬಿಎಸ್ ಅಪರೂಪದ ರೋಗವಾಗಿದ್ದು ದಿಢೀರ್ ಮರಗಟ್ಟುವಿಕೆ ಮತ್ತು ಸ್ನಾಯು ನಿಶ್ಶಕ್ತಿಗೆ ಕಾರಣವಾಗುತ್ತದೆ. ಕಾಲುಗಳಲ್ಲಿ ತೀವ್ರ ನಿಶ್ಶಕ್ತಿ,ಬೇಧಿ ಇತ್ಯಾದಿಗಳು ರೋಗಲಕ್ಷಣಗಳಾಗಿವೆ.
ವೈದ್ಯರ ಪ್ರಕಾರ ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು ಜಿಎಸ್ಬಿಗೆ ಕಾರಣವಾಗುತ್ತವೆ. ಅವು ರೋಗಿಗಳ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ ಮತ್ತು ಪ್ರಸಕ್ತ ಪ್ರಕರಣಕ್ಕೆ ಕಲುಷಿತ ನೀರು ಕಾರಣವಾಗಿತ್ತು ಎಂದು ಶಂಕಿಸಲಾಗಿದೆ.
ಕೇಂದ್ರ ಸರಕಾರವು ಕಳುಹಿಸಿರುವ ತಜ್ಞ ವೈದ್ಯರ ತಂಡವು ಪುಣೆಗೆ ಆಗಮಿಸಿದೆ ಎಂದು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿದವು.
ಸೋಮವಾರ ಪುಣೆಗೆ ಭೇಟಿ ನೀಡಿದ ರಾಜ್ಯದ ಆರೋಗ್ಯ ಸಚಿವ ಪ್ರಕಾಶ ಅಬಿತ್ಕರ್ ಅವರು ಪೀಡಿತ ಸಿಂಹಗಡ ರೋಡ್ ಪ್ರದೇಶದಲ್ಲಿಯ ನಾಂದೇಡ್ ಗ್ರಾಮದಲ್ಲಿಯ ಬಾವಿಯನ್ನು ಪರಿಶೀಲಿಸಿದರು. ಈ ಬಾವಿಯು ನೆರೆಯ ಗ್ರಾಮಗಳಿಗೆ ನೀರನ್ನು ಪೂರೈಸುತ್ತಿದೆ. ಪುಣೆಯ ಕೆಲವು ಆಸ್ಪತ್ರೆಗಳಿಗೂ ಭೇಟಿ ನೀಡಿ ರೋಗಿಗಳ ಸ್ಥಿತಿಯನ್ನು ವಿಚಾರಿಸಿದರು.







