ಮಹಾರಾಷ್ಟ್ರದಲ್ಲಿ ಐದು ಹೊಸ ಜಿಬಿಎಸ್ ಪ್ರಕರಣಗಳು ಪತ್ತೆ; ಒಟ್ಟು ಸಂಖ್ಯೆ 163ಕ್ಕೇರಿಕೆ

ಸಾಂದರ್ಭಿಕ ಚಿತ್ರ | PC : freepik.com
ಪುಣೆ: ಪುಣೆಯ ಐವರಲ್ಲಿ ಅಪರೂಪದ ನರರೋಗ ಗಿಲಿಯಾನ್ ಬಾರೆ ಸಿಂಡ್ರೋಮ್(ಜಿಬಿಎಸ್) ಪತ್ತೆಯಾಗಿದ್ದು,ಇದರೊಂದಿಗೆ ಮಹಾರಾಷ್ಟ್ರದಲ್ಲಿ ಶಂಕಿತ ಪ್ರಕರಣಗಳ ಒಟ್ಟು ಸಂಖ್ಯೆ 163ಕ್ಕೇರಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು.
ರಾಜ್ಯದಲ್ಲಿ ಈವರೆಗೆ ಐವರು ಈ ರೋಗಕ್ಕೆ ಬಲಿಯಾಗಿದ್ದಾರೆ.
ಸೋಮವಾರ ಹೊಸದಾಗಿ ಐದು ಪ್ರಕರಣಗಳು ಪತ್ತೆಯಾಗಿವೆ,ಆದರೆ ಯಾವುದೇ ಸಾವು ವರದಿಯಾಗಿಲ್ಲ. 127 ಜಿಬಿಎಸ್ ಪ್ರಕರಣಗಳು ದೃಢಪಟ್ಟಿವೆ. ಶಂಕಿತ 163 ಪ್ರಕರಣಗಳಲ್ಲಿ ಪುಣೆ ನಗರದ 32,ಪುಣೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಗ್ರಾಮಗಳ 86,ಪಿಂಪ್ರಿ ಚಿಂಚ್ವಾಡದ 18,ಪುಣೆ ಗ್ರಾಮೀಣದ 19 ಮತ್ತು ಇತರ ಜಿಲ್ಲೆಗಳ ಎಂಟು ಪ್ರಕರಣಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದರು.
163 ರೋಗಿಗಳ ಪೈಕಿ ಈವರೆಗೆ 47 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ,47 ರೋಗಿಗಳು ಐಸಿಯುನಲ್ಲಿದ್ದು,21 ರೋಗಿಗಳಿಗೆ ವೆಂಟಲೇಟರ್ ಅಳವಡಿಸಲಾಗಿದೆ ಎಂದರು.
ಪುಣೆ ನಗರದ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ಒಟ್ಟು 168 ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ ಸರಕಾರಿ ಆರೋಗ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು,ಈ ಪೈಕಿ ಎಂಟು ನೀರಿನ ಮೂಲಗಳು ಕಲುಷಿತಗೊಂಡಿದ್ದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜಿಬಿಎಸ್ ಅಪರೂಪದ ರೋಗವಾಗಿದ್ದು ದಿಢೀರ್ ಮರಗಟ್ಟುವಿಕೆ ಮತ್ತು ಸ್ನಾಯು ನಿಶ್ಶಕ್ತಿಗೆ ಕಾರಣವಾಗುತ್ತದೆ. ಕಾಲುಗಳಲ್ಲಿ ತೀವ್ರ ನಿಶ್ಶಕ್ತಿ,ಬೇಧಿ ಇತ್ಯಾದಿಗಳು ರೋಗಲಕ್ಷಣಗಳಾಗಿವೆ. ರೋಗಿಗಳಲ್ಲಿ ಉಸಿರಾಟದ ತೊಂದರೆ ಅಥವಾ ನುಂಗಲು ಕಷ್ಟದಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.