ಮಹಾರಾಷ್ಟ್ರ:ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸದ್ದಕ್ಕಾಗಿ ಮಗಳನ್ನು ಥಳಿಸಿ ಕೊಂದ ತಂದೆ!
ಗಾಯಗೊಂಡಿದ್ದ ಮಗಳನ್ನು ಆಸ್ಪತ್ರೆಗೆ ದಾಖಲಿಸದೇ, ಯೋಗದಿನ ಕಾರ್ಯಕ್ರಮಕ್ಕೆ ತೆರಳಿದ ತಂದೆ

PC : NDTV
ಸಾಂಗ್ಲಿ(ಮಹಾರಾಷ್ಟ್ರ): ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ವಿಫಲಗೊಂಡಿದ್ದಕ್ಕಾಗಿ 17ರ ಹರೆಯದ ಬಾಲಕಿಯನ್ನು ಆಕೆಯ ತಂದೆಯೇ ನಿರ್ದಯವಾಗಿ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಸಾಂಗ್ಲಿ ಜಿಲ್ಲೆಯ ಆಟ್ಪಾಡಿ ತಾಲೂಕಿನ ನೇಲಕರಂಜಿ ಗ್ರಾಮದಲ್ಲಿ ನಡೆದಿದೆ.
12ನೇ ತರಗತಿಯ ವಿದ್ಯಾರ್ಥಿನಿ ಸಾಧನಾ ಭೋಸಲೆ ಮೃತ ಬಾಲಕಿಯಾಗಿದ್ದಾಳೆ. ಮಗಳು ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದರಿಂದ ತಂದೆ ಧೋಂಡಿರಾಮ ಭೋಸಲೆ ಅಸಮಾಧಾನಗೊಂಡಿದ್ದು,ಇದು ಅವರಿಬ್ಬರ ನಡುವೆ ವಿವಾದಕ್ಕೆ ಕಾರಣವಾಗಿತ್ತು.
ವರದಿಯ ಪ್ರಕಾರ ಶಾಲಾ ಮುಖ್ಯೋಪಾಧ್ಯಾಯರಾಗಿರುವ ಭೋಸಲೆ ಸಾಧನಾಳನ್ನು ಆಕೆಯ ಕಳಪೆ ಸಾಧನೆಯ ಬಗ್ಗೆ ಪ್ರಶ್ನಿಸಿದ್ದರು. ಹದಿಹರೆಯದ ಬಾಲಕಿ,ಅಪ್ಪಾ,ನೀವು ಯಾವ ಕಲೆಕ್ಟರ್ ಆಗಿದ್ದೀರಿ? ನೀವೂ ಕಡಿಮೆ ಅಂಕಗಳನ್ನು ಪಡೆದಿದ್ದೀರಿ ಎಂದು ಉತ್ತರಿಸಿದ್ದಳು.
ಈ ಉತ್ತರದಿಂದ ಕೆರಳಿದ್ದ ಭೋಸಲೆ ಅರೆಯುವ ಕಲ್ಲಿಗೆ ಸಿಕ್ಕಿಸಿದ್ದ ಮರದ ಹ್ಯಾಂಡಲ್ನ್ನು ಕಿತ್ತುಕೊಂಡು ತನ್ನ ಪತ್ನಿ ಮತ್ತು ಮಗನ ಮುಂದೆಯೇ ಮಗಳನ್ನು ಥಳಿಸಿದ್ದರು.
ಭೋಸಲೆ ರಾತ್ರಿಯಿಡೀ ನಿರ್ದಯವಾಗಿ ಸಾಧನಾಳನ್ನು ಥಳಿಸುತ್ತಲೇ ಇದ್ದರು. ಆಕೆ ತೀವ್ರವಾಗಿ ಗಾಯಗೊಂಡಿದ್ದರೂ ಭೋಸಲೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯದೆ ಮರುದಿನ ಬೆಳಿಗ್ಗೆ ಯೋಗದಿನದ ಕಾರ್ಯಕ್ರಮಕ್ಕೆ ತೆರಳಿದ್ದರು. ತಾಯಿ ಮತ್ತು ತಮ್ಮ ಸಾಧನಾಳನ್ನು ಸಾಂಗ್ಲಿಯ ಆಸ್ಪತ್ರಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ.
ಸಾಧನಾಳ ತಾಯಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಭೋಸಲೆಯನ್ನು ಬಂಧಿಸಿದ್ದಾರೆ.







