ಮಹಾರಾಷ್ಟ್ರ| ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಗರ್ಭಿಣಿಯ ಹೊಟ್ಟೆಗೆ ಆ್ಯಸಿಡ್ ಲೇಪಿಸಿದ ನರ್ಸ್!
ವೈದ್ಯಕೀಯ ಜೆಲ್ಲಿಯೆಂದು ತಪ್ಪಾಗಿ ಗ್ರಹಿಸಿ ಹೈಡ್ರೋಕ್ಲೋರಿಕ್ ಆ್ಯಸಿಡ್ ಬಳಕೆ

ಸಾಂದರ್ಭಿಕ ಚಿತ್ರ | PC : freepik.com
ಜಾಲ್ನಾ: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಸರಕಾರಿ ಆಸ್ಪತ್ರೆಯೊಂದರಲ್ಲಿ ಹೆರಿಗೆ ಸಮಯದಲ್ಲಿ ಗರ್ಭಿಣಿಯ ಹೊಟ್ಟೆಗೆ ವೈದ್ಯಕೀಯ ಜೆಲ್ಲಿಯ ಬದಲು ಹೈಡ್ರೋಕ್ಲೋರಿಕ್ ಆ್ಯಸಿಡ್ ಅನ್ನು ಲೇಪಿಸಲಾಗಿತ್ತು ಎಂದು ಹೇಳಲಾಗಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಶುಕ್ರವಾರ ಜಿಲ್ಲೆಯ ಭೋಕರ್ದಾನ್ನ ಸರಕಾರಿ ಗ್ರಾಮೀಣ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಗೆ ಸುಟ್ಟ ಗಾಯಗಳಾಗಿವೆ.
ಖಪರಖೇಡ್ ಗ್ರಾಮದ ನಿವಾಸಿ ಶೀಲಾ ಭಾಲೇರಾವ್ ಅವರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ನರ್ಸ್ ಹೆರಿಗೆ ಸಮಯದಲ್ಲಿ ವೈದ್ಯಕೀಯ ಜೆಲ್ಲಿಯೆಂದು ತಪ್ಪಾಗಿ ಗ್ರಹಿಸಿ ಹೈಡ್ರೋಕ್ಲೋರಿಕ್ ಆ್ಯಸಿಡ್ನ್ನು ಬಳಸಿದ್ದಳು ಎಂದು ಅಧಿಕಾರಿಯೋರ್ವರು ತಿಳಿಸಿದರು.
ಹೊಟ್ಟೆಯ ಮೇಲೆ ಗಂಭೀರ ಗಾಯಗಳಾಗಿರುವ ಶೀಲಾ ಈ ಗಂಭೀರ ಪ್ರಮಾದದ ಹೊರತಾಗಿಯೂ ಆರೋಗ್ಯವಂತ ಮಗುವಿಗೆ ಜನನ ನೀಡಿದ್ದಾರೆ ಎಂದರು.
ಆಸ್ಪತ್ರೆಯ ಮೂಲಗಳ ಪ್ರಕಾರ ನೈರ್ಮಲ್ಯ ಕಾರ್ಮಿಕನೋರ್ವ ಸ್ವಚ್ಛತಾ ಕೆಲಸಕ್ಕೆ ಬಳಸುವ ಆ್ಯಸಿಡ್ ಅನ್ನು ಪ್ರಮಾದವ್ಶಾತ್ ಔಷಧಿಗಳ ಟ್ರೇದಲ್ಲಿ ಇಟ್ಟಿದ್ದ.
ಇದು ನಿರ್ಲಕ್ಷ್ಯದ ಗಂಭೀರ ಪ್ರಕರಣವಾಗಿದ್ದು, ವಿವರವಾದ ತನಿಖೆಯನ್ನು ಆರಂಭಿಸಲಾಗಿದೆ. ತಪ್ಪಿತಸ್ಥರೆಂದು ಕಂಡು ಬಂದವ್ರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಸಿವಿಲ್ ಸರ್ಜನ್ ಡಾ.ಆರ್.ಎಸ್.ಪಾಟೀಲ್ ಅವರು ಸುದ್ದಿಗಾರರಿಗೆ ತಿಳಿಸಿದರು.







