ಮಹಾರಾಷ್ಟ್ರ| ಆನ್ ಲೈನ್ ನಲ್ಲಿ ಹಾಲು ಆರ್ಡರ್; 18.5 ಲಕ್ಷ ರೂ. ಕಳೆದುಕೊಂಡ ಮಹಿಳೆ!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ. 16: ಆನ್ ಲೈನ್ ನಲ್ಲಿ 1 ಲೀಟರ್ ಹಾಲಿಗೆ ಆರ್ಡರ್ ಮಾಡಲು ಪ್ರಯತ್ನಿಸಿದ ಮುಂಬೈಯ 71 ವರ್ಷದ ಮಹಿಳೆಯೋರ್ವರು ತನ್ನ ಬ್ಯಾಂಕ್ ಖಾತೆಗಳಲ್ಲಿದ್ದ 18.5 ಲಕ್ಷ ರೂ.ವನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮುಂಬೈಯ ವಡಾಲ ನಿವಾಸಿಯಾಗಿರುವ ಈ ಮಹಿಳೆ ಈ ತಿಂಗಳ ಆರಂಭದಲ್ಲಿ ಆನ್ ಲೈನ್ ಅಪ್ಲಿಕೇಷನ್ ಮೂಲಕ ಹಾಲು ಆರ್ಡರ್ ಮಾಡಲು ಪ್ರಯತ್ನಿಸಿದ್ದರು. ಅನಂತರ ಎರಡು ದಿನಗಳಲ್ಲಿ ಅವರು ಮೂರು ಬ್ಯಾಂಕ್ ಖಾತೆಗಳಿಂದ ಹಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಮಹಿಳೆಗೆ ಹಾಲಿನ ಕಂಪೆನಿಯ ನಿರ್ವಾಹಕ ಎಂದು ಪರಿಚಯಿಸಿಕೊಂಡ ದೀಪಕ್ ಎಂಬ ವ್ಯಕ್ತಿ ಕರೆ ಮಾಡಿದ್ದ. ಅನಂತರ ಆತ ಲಿಂಕ್ ಒಂದನ್ನು ಕಳುಹಿಸಿದ್ದ. ಹಾಲಿಗೆ ಆರ್ಡರ್ ಮಾಡಲು ಲಿಂಕ್ನಲ್ಲಿ ವೈಯುಕ್ತಿಕ ವಿವರ ತುಂಬಿಸುವಂತೆ ಮಹಿಳೆಗೆ ಸೂಚಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆ ಸುಮಾರು 1 ಗಂಟೆಗೂ ಅಧಿಕ ಕಾಲ ಕರೆಯಲ್ಲಿದ್ದುಕೊಂಡು ಆತನ ನಿರ್ದೇಶನಗಳನ್ನು ಪಾಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮರುದಿನ ಅದೇ ವ್ಯಕ್ತಿ ಮತ್ತೆ ಕರೆ ಮಾಡಿದ್ದ ಹಾಗೂ ಹೆಚ್ಚುವರಿ ಮಾಹಿತಿಗಳನ್ನು ಪಡೆದುಕೊಂಡಿದ್ದ ಎಂದು ಅವರು ಹೇಳಿದ್ದಾರೆ.
ಕೆಲವು ದಿನಗಳ ಬಳಿಕ ಮಹಿಳೆ ಬ್ಯಾಂಕ್ಗೆ ಭೇಟಿ ನೀಡಿದ್ದರು. ಈ ಸಂದರ್ಭ ತನ್ನ ಮೂರು ಬ್ಯಾಂಕ್ ಖಾತೆಗಳಿಂದ ಒಟ್ಟು 18.5 ಲಕ್ಷ ರೂ. ವಂಚಿಸಿರುವುದು ಅವರ ಅರಿವಿಗೆ ಬಂದಿದೆ. ಮೊಬೈಲ್ಗೆ ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿದ ಕೂಡಲೇ ಆರೋಪಿಗಳು ಫೋನ್ ಹ್ಯಾಕ್ ಮಾಡಿದ್ದಾರೆ ಹಾಗೂ ಒಟ್ಟು 18.5 ಲಕ್ಷ ರೂ. ವಂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಲಾಗಿದೆ ಹಾಗೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







