ಮಹಾರಾಷ್ಟ್ರ | ರನ್ ವೇ ನಲ್ಲೇ ಹೊಂಡ; ನಾಂದೇಡ್ ವಿಮಾನನಿಲ್ದಾಣ ಬಂದ್

ಸಾಂದರ್ಭಿಕ ಚಿತ್ರ
ನಾಂದೇಡ್,ಆ.18: ಗಂಭೀರವಾದ ಸುರಕ್ಷತಾ ಲೋಪಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಾಂದೇಡ್ ನ ಶ್ರೀ ಗುರುಗೋಬಿಂದ ಸಿಂಗ್ ಜಿ ವಿಮಾನನಿಲ್ದಾಣವನ್ನು ಶನಿವಾರ ಮುಚ್ಚುಗಡೆಗೊಳಿಸಲಾಗಿದೆ ಎಂದು ನಾಗರಿಕ ವಾಯುಯಾನ ನಿಯಂತ್ರಣ ಸಂಸ್ಥೆ (ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ.
ರನ್ ವೇಯಲ್ಲಿ ಹೊಂಡಗಳು, ವಿದ್ಯುತ್ ಬ್ಯಾಕ್ ಅಪ್ ಇಲ್ಲದೇ ಇರುವುದು ಹಾಗೂ ಅಸಮರ್ಪಕವಾದ ಅಗ್ನಿಶಾಮಕ ಸಾಧನಗಳು ಸೇರಿದಂತೆ ನಾಲ್ಕು ಗಂಭೀರವಾದ ಸಮಸ್ಯೆಗಳು ನಾಂದೇಡ್ ವಿಮಾನನಿಲ್ದಾಣದಲ್ಲಿ ಕಂಡುಬಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನ್ಯೂನತೆಗಳನ್ನು ಡಿಜಿಸಿಎ ‘ಎಲ್1 ’ ಶ್ರೇಣಿಯಲ್ಲಿರಿಸಿದೆ ಎಂದು ಅವರು ಹೇಳಿದ್ದಾರೆ. ಗಂಭೀರವಾದ ಸುರಕ್ಷತಾ ಉಲ್ಲಂಘನೆಗಳನ್ನು ಎಲ್1 ಶ್ರೇಣಿಯಲ್ಲಿರಿಸಲಾಗುತ್ತಿದೆ.
ನಾಂದೇಡ್ ವಿಮಾನನಿಲ್ದಾಣವು ದಿನದಲ್ಲಿ ಏಳು ತಾಸು ಕಾರ್ಯನಿರ್ವಹಿಸುತ್ತಿದ್ದು, ಸ್ಟಾರ್ಏರ್ , ಇಲ್ಲಿಂದ ವಿಮಾನ ಹಾರಾಟ ನಡೆಸುತ್ತಿರುವ ಏಕೈಕ ವಾಯುಯಾನ ಸಂಸ್ಥೆಯಾಗಿದೆ.
ನಾಂದೇಡ್ ವಿಮಾನನಿಲ್ದಾಣವು ಡೊಪ್ಲರ್ ವಿಓಆರ್ ರೇಡಿಯೋ ನೇವಿಗೇಶನ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಈ ವ್ಯವಸ್ಥೆಯು ಉಪಗ್ರಹ ಆಧಾರಿತ ವ್ಯವಸ್ಥೆಗಿಂತ ಕಡಿಮೆ ನಿಖರತೆಯನ್ನು ಹೊಂದಿದೆ.
ಈ ಮಧ್ಯೆ ವಾಯುಯಾನ ಸಂಸ್ಥೆ ಸ್ಟಾರ್ ಏರ್ ಹೇಳಿಕೆಯೊಂದನ್ನು ವಿಮಾನನಿಲ್ದಾಣದ ಮುಚ್ಚುಗಡೆಯು ತನ್ನ ಮೇಲೆ ಪರಿಣಾಮ ಬೀರಿರುವುದಾಗಿ ಹೇಳಿದೆ.
ನಾಂದೇಡ್ ನಿಂದ ಸ್ಟಾರ್ ಏರ್ ಪ್ರತಿವಾರ ಅಂದಾಜು 5 ಸಾವಿರ ಪ್ರಯಾಣಿಕರನ್ನು ಒಯ್ಯುತ್ತಿದೆ. ನಾಂದೇಡ್ ಯಾತ್ರಾಸ್ಥಳವಾಗಿರುವುದರಿಂದ 1.80 ಲಕ್ಷದವರೆಗೂ ಮುಂಗಡ ಬುಕಿಂಗ್ ಗಳಿರುತ್ತವೆ. ವಿಮಾನನಿಲ್ದಾಣದ ಮುಚ್ಚುಗಡೆಯು ಪ್ರಯಾಣಿಕರು ಮಾತ್ರವಲ್ಲದೆ ತನ್ನ ಮೇಲೂ ಪರಿಣಾಮ ಬೀರಿದೆಯೆಂದು ಸ್ಟಾರ್ಏರ್ ಹೇಳಿದೆ.







