ಮಹಾರಾಷ್ಟ್ರ:‘ಹಲಾಲ್ ಲೈಫ್ಸ್ಟೈಲ್ ಟೌನ್ಶಿಪ್’ ಯೋಜನೆಯಿಂದ ವಿವಾದ ಸೃಷ್ಟಿ, ಜಾಹೀರಾತು ಮಾಯ

PC : X
ಮುಂಬೈ,ಸೆ.5: ಮುಂಬೈನಿಂದ ಸುಮಾರು 100 ಕಿ.ಮೀ.ದೂರದ ನೇರಲ್ ನಲ್ಲಿ ಪ್ರಸ್ತಾವಿತ ರಿಯಲ್ ಎಸ್ಟೇಟ್ ಯೋಜನೆಯೊಂದರ ಜಾಹೀರಾತು ಆನ್ಲೈನ್ ನಲ್ಲಿ ವೈರಲ್ ಆಗಿದ್ದು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.
‘ಹಲಾಲ್ ಲೈಫ್ಸ್ಟೈಲ್ ಟೌನ್ಶಿಪ್’ ಎಂದು ಯೋಜನೆಗೆ ಪ್ರಚಾರ ನೀಡಲಾಗಿದ್ದು, ಇದು ಧರ್ಮದ ಆಧಾರದಲ್ಲಿ ಪ್ರತ್ಯೇಕತೆಯನ್ನು ಉತ್ತೇಜಿಸುತ್ತಿದೆ ಎಂಬ ಟೀಕೆಗಳು ಮತ್ತು ಆರೋಪಗಳಿಗೆ ಗುರಿಯಾಗಿದೆ. ಈ ಯೋಜನೆಯನ್ನು ಒಂದು ಸಮುದಾಯದ ವಸತಿ ಸ್ಥಳವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಪ್ರಿಯಾಂಕ್ ಕಾನುಂಗೊ ಅವರು ತನ್ನ ಎಕ್ಸ್ ಪೋಸ್ಟ್ ನಲ್ಲಿ ಜಾಹೀರಾತಿನ ವೀಡಿಯೊವನ್ನು ಹಂಚಿಕೊಂಡು, ಅದನ್ನು ‘ದೇಶದೊಳಗೊಂದು ದೇಶ’ ಎಂದು ಬಣ್ಣಿಸಿದ ಬಳಿಕ ವಿವಾದ ಭುಗಿಲೆದ್ದಿದೆ.
ಹಲಾಲ್ ಟೌನ್ ಶಿಪ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಬಿಲ್ಡರ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಜಾಹೀರಾತನ್ನು ತೆಗೆದುಹಾಕಿದ್ದಾರೆ.
ಜಾಹೀರಾತಿನಲ್ಲಿ ಹಿಜಾಬ್ ಧರಿಸಿರುವ ಮಹಿಳೆಯೋರ್ವಳು ಟೌನ್ ಶಿಪ್ ನ್ನು ‘ಒಂದೇ ರೀತಿಯ ಮೌಲ್ಯಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕ ಕುಟುಂಬಗಳೊಂದಿಗೆ ಅಧಿಕೃತ ಸಮುದಾಯ ಜೀವನವನ್ನು ಒದಗಿಸುವ ಸ್ಥಳ’ ಎಂದು ಬಣ್ಣಿಸಿರುವುದನ್ನು ತೋರಿಸಲಾಗಿತ್ತು. ಪ್ರಾರ್ಥನಾ ಸ್ಥಳಗಳು ಮತ್ತು ಸಮುದಾಯ ಕೂಟಗಳು ಕಾಲ್ನಡಿಗೆಯ ಅಂತರದಲ್ಲಿವೆ ಎಂದೂ ಜಾಹೀರಾತಿನಲ್ಲಿ ಹೇಳಲಾಗಿತ್ತು.
ಎಕ್ಸ್ ನಲ್ಲಿ ವೀಡಿಯೊ ಹಂಚಿಕೊಂಡಿರುವ ಕಾನುಂಗೊ ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಯೋಜನೆಯಲ್ಲಿ ‘ಹಲಾಲ್’ ಪದದ ಬಳಕೆಯನ್ನು ಟೀಕಿಸಿದ ಅಖಿಲ ಭಾರತ ಮುಸ್ಲಿಮ್ ಜಮಾಅತ್ ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ಬರೇಲ್ವಿ ಅವರು, ಇದು ಸಮಾಜದಲ್ಲಿ ದ್ವೇಷವನ್ನು ಹರಡುವ ಪ್ರಯತ್ನವಾಗಿದೆ ಎಂದು ಹೇಳಿದರು.
ಇಂತಹ ಹೆಸರು ಮತ್ತು ಹಲಾಲ್ ಪದವನ್ನು ಬಳಸುವ ಮೂಲಕ ನಿರ್ದಿಷ್ಟ ರೀತಿಯ ಸಂದೇಶವನ್ನು ರವಾನಿಸಲು ಪ್ರಯತ್ನಿಸಲಾಗಿದೆ. ಇದರಲ್ಲಿ ಭಾಗಿಯಾಗಿರುವ ಬಿಲ್ಡರ್ ಮತ್ತು ಇತರರು ಸಮಾಜವನ್ನು ಒಗ್ಗೂಡಿಸಲು ಅಲ್ಲ, ಬದಲಿಗೆ ದ್ವೇಷವನ್ನು ಹರಡಲು ಮತ್ತು ವಿಭಜನೆಯನ್ನು ಸೃಷ್ಟಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬರೇಲ್ವಿ ಹೇಳಿದರು.
ಜಾಹೀರಾತಿನ ಹಿಂದಿನ ಉದ್ದೇಶವನ್ನು ಪ್ರಶ್ನಿಸಿರುವ ಶಿವಸೇನೆ ವಕ್ತಾರ ಕೃಷ್ಣ ಹೆಗಡೆ ಅವರು, ಯೋಜನೆಯ ಕುರಿತು ತನಿಖೆಗೆ ಆದೇಶಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.







