ಮಹಾರಾಷ್ಟ್ರ | ಔರಂಗಾಬಾದ್ ರೈಲ್ವೆ ನಿಲ್ದಾಣವಿನ್ನು ಛತ್ರಪತಿ ಸಂಭಾಜಿನಗರ್ ರೈಲ್ವೆ ನಿಲ್ದಾಣ

ಔರಂಗಾಬಾದ್ ರೈಲ್ವೆ ನಿಲ್ದಾಣ | Photo Credit : NDTV
ಮುಂಬೈ: ಮಹಾರಾಷ್ಟ್ರ ಸರಕಾರ ಔರಂಗಾಬಾದ್ ರೈಲ್ವೆ ನಿಲ್ದಾಣಕ್ಕೆ ಛತ್ರಪತಿ ಸಂಭಾಜಿನಗರ್ ರೈಲ್ವೆ ನಿಲ್ದಾಣ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಿದ್ದು, ಈ ಕುರಿತು ಅಧಿಸೂಚನೆ ಪ್ರಕಟಿಸಿದೆ. ಮೂರು ವರ್ಷಗಳ ಹಿಂದೆ ಏಕನಾಥ್ ಶಿಂದೆ ನೇತೃತ್ವದ ಸರಕಾರ ಔರಂಗಾಬಾದ್ ನಗರಕ್ಕೆ ಛತ್ರಪತಿ ಸಂಭಾಜಿನಗರ್ ಎಂದು ಮರುನಾಮಕರಣ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮುಘಲ್ ಚಕ್ರವರ್ತಿ ಔರಂಗಝೇಬ್ ಸ್ಮರಣಾರ್ಥ ಔರಂಗಾಬಾದ್ ಎಂದು ನಾಮಕರಣಗೊಂಡಿದ್ದ ಈ ನಗರಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿಗೆ ಗೌರವ ಸಲ್ಲಿಸುವ ಭಾಗವಾಗಿ ಈ ಮರುನಾಮಕರಣ ಮಾಡಲಾಗಿದೆ.
ಮೂಲತಃ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರಕಾರ ಚಾಲನೆ ನೀಡಿದ್ದ ಈ ಮರುನಾಮಕರಣ ಪ್ರಕ್ರಿಯೆಗೆ ಅಕ್ಟೋಬರ್ 15ರಂದು ಅಧಿಸೂಚನೆ ಹೊರಡಿಸುವ ಮೂಲಕ, ಬಿಜೆಪಿ ನೇತೃತ್ವದ ಮಹಾಯುತಿ ಸರಕಾರ ರೈಲ್ವೆ ನಿಲ್ದಾಣದ ಮರುನಾಮಕರಣವನ್ನು ಅಧಿಕೃತವಾಗಿ ಪ್ರಕಟಿಸಿತ್ತು.
ಹೈದರಾಬಾದ್ ನ ಏಳನೆ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡ ಈ ಐತಿಹಾಸಿಕ ರೈಲ್ವೆ ನಿಲ್ದಾಣ, 1900ರಲ್ಲಿ ಉದ್ಘಾಟನೆಗೊಂಡಿತ್ತು.





