ಮಹಾರಾಷ್ಟ್ರ | ವಿಮೆ ಪರಿಹಾರ ಪಾವತಿಗೆ ವಿಳಂಬ : ಬ್ಯಾಂಕ್ ಹೊರಗೆ ಎಮ್ಮೆ ಕಳೇಬರ ಇರಿಸಿ ರೈತನಿಂದ ಪ್ರತಿಭಟನೆ

ಸಾಂದರ್ಭಿಕ ಚಿತ್ರ
ಪಾಲ್ಘಾರ್(ಮಹಾರಾಷ್ಟ್ರ), ನ. 2: ರೈತನೋರ್ವ ಪಾಲ್ಘಾರ್ ಜಿಲ್ಲೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ನ ಹೊರಗೆ ಎಮ್ಮೆಯ ಕಳೇಬರ ಇರಿಸಿ ಕೂಡಲೇ ವಿಮಾ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾನೆ.
ಈ ನಾಟಕೀಯ ಪ್ರತಿಭಟನೆ ದೊಡ್ಡ ಸಂಖ್ಯೆಯಲ್ಲಿ ಜನರ ಗಮನ ಸೆಳೆಯಿತು.
ಬ್ಯಾಂಕ್ನ ಪ್ರವೇಶ ದ್ವಾರದಲ್ಲಿ ಎಮ್ಮೆಯ ಕಳೇಬರ ಇರಿಸಿ ನಡೆಯುತ್ತಿದ್ದ ಪ್ರತಿಭಟನೆ ವೀಡಿಯೊ ಸಾಮಾಜಿಕ ಮಾದ್ಯಮದಲ್ಲಿ ಕೂಡಲೇ ವೈರಲ್ ಆಯಿತು. ಇದು ಸಾಲ ಮತ್ತು ನಷ್ಟದಲ್ಲಿ ಸಿಲುಕಿದ ರೈತರ ವಿಮಾ ಕ್ಲೈಮ್ಗಳನ್ನು ವಿಳಂಬ ಮಾಡುವ ಕುರಿತ ಚರ್ಚೆಗೆ ಕಾರಣವಾಯಿತು.
ಜಿಲ್ಲೆಯ ತಕ್ಪಾಡ ಗ್ರಾಮದ ಜಾನುವಾರು ಸಾಕುವ ನವ್ಸ ದಿಘಾ ಬ್ಯಾಂಕ್ನ ಮೊಖದಾ ಶಾಖೆಯಿಂದ 12 ಲಕ್ಷ ರೂ. ಸಾಲ ಪಡೆದು 10 ಹಾಲು ಕೊಡುವ ಎಮ್ಮೆಗಳನ್ನು ಖರೀದಿಸಿದ್ದರು. ಈ ಎಮ್ಮೆಗಳಿಗೆ ವಿಮೆ ಮಾಡಿಸಲಾಗಿತ್ತು. ಆದರೂ ಕಳೆದ ಮೂರು ವರ್ಷಗಳಲ್ಲಿ ಸಾವನ್ನಪ್ಪಿದ ಎರಡು ಎಮ್ಮೆಗಳಿಗೆ ಪರಿಹಾರವನ್ನು ಬ್ಯಾಂಕ್ ಪಾವತಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ದಿಘಾ ಶನಿವಾರ ಟ್ರ್ಯಾಕ್ಟರ್ನಲ್ಲಿ ಎಮ್ಮೆಯ ಕಳೇಬರವನ್ನು ತಂದು ಬ್ಯಾಂಕ್ನ ಸ್ಥಳೀಯ ಶಾಖೆಯ ಎದುರು ನಿಲ್ಲಿಸಿದರು. ‘‘ನನ್ನ ಎಮ್ಮೆಗಳಿಗೆ ವಿಮೆ ತೆಗೆದುಕೊಂಡ ಬಳಿಕವೂ ನಾನು ಪರಿಹಾರವಾಗಿ ಒಂದೇ ಒಂದು ರೂಪಾಯಿ ಸ್ವೀಕರಿಸಿಲ್ಲ. ಬ್ಯಾಂಕ್ಗಳ ನಿರ್ಲಕ್ಷ್ಯದಿಂದ ರೈತರು ಮೋಸ ಹೋಗುತ್ತಿದ್ದಾರೆ’’ ಎಂದು ಅವರು ಹೇಳಿದರು.
‘‘ಕೂಡಲೇ ಹಣ ನೀಡದೇ ಇದ್ದರೆ, ನಾನು ಸತ್ತ ಎಮ್ಮೆಯನ್ನು ಇಲ್ಲಿಯೇ ಬಿಟ್ಟು ಹೋಗುತ್ತೇನೆ. ನನಗೆ ಹಣ ಪಾವತಿಸುವವರೆಗೆ ಬ್ಯಾಂಕ್ ಅದನ್ನು ಇರಿಸಿಕೊಳ್ಳಲಿ’’ ಎಂದು ಅವರು ಪ್ರತಿಭಟನೆ ಸಂದರ್ಭ ಎಚ್ಚರಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಸ್ಥಳೀಯ ರೈತ ನಾಯಕರು ಹಾಗೂ ರಾಜಕಾರಣಿಗಳು ಪಾಲ್ಗೊಂಡಿದ್ದರು. ಜನಸಂದಣಿಯನ್ನು ನಿಯಂತ್ರಿಸಲು ಕೂಡಲೇ ಪೊಲೀಸರನ್ನು ಕರೆಸಲಾಯಿತು.
ಬ್ಯಾಂಕ್ನ ಹಿರಿಯ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ ದಿಘಾ ಹಾಗೂ ಇತರ ಸಂತ್ರಸ್ತ ರೈತರಿಗೆ ವಿಮಾ ಕಂಪೆನಿಯ ಮೂಲಕ 31 ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದು ಲಿಖಿತ ಭರವಸೆ ನೀಡಿದರು. ಅನಂತರ ದಿಘಾ ಪ್ರತಿಭಟನೆಯನ್ನು ಹಿಂಪಡೆದರು.







