Maharashtra | ಸಾಲ ಮರುಪಾವತಿ ಬಳಿಕವೂ ಹೆಚ್ಚುವರಿ ಹಣಕ್ಕೆ ಒತ್ತಡ; ಫೈನಾನ್ಸ್ ಕಿರುಕುಳಕ್ಕೆ ಮನನೊಂದು ರೈತ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ,ಡಿ.6: ಲೇವಾದೇವಿಗಾರರ ಕಿರುಕುಳವನ್ನು ತಾಳಲಾರದೆ ರೈತನೊಬ್ಬ ಸಾವಿಗೆ ಶರಣಾದ ಘಟನೆ ಮಹಾರಾಷ್ಟ್ರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಗೋಪಾಲ್ ವಾಮನರಾವ್ ಫಾಟ್ಕಡೆ ಎಂದು ಗುರುತಿಸಲಾಗಿದೆ.
ಸಾಲದ ಹಣವನ್ನು ಬಡ್ಡಿಸಮೇತ ಹಿಂತಿರುಗಿಸಿದ ಬಳಿಕವೂ ಹೆಚ್ಚುವರಿ ಹಣ ಪಾವತಿಸುವಂತೆ ಲೇವಾದೇವಿಗಾರರು ತನ್ನನ್ನು ಪೀಡಿಸುತ್ತಿದ್ದರೆಂದು ಅವರು ನವೆಂಬರ್ 26ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಾಖಲಿಸಿದ ವೀಡಿಯೋದಲ್ಲಿ ಆಪಾದಿಸಿದ್ದಾರೆ.
‘‘ನಾನು ಒತ್ತಡಕ್ಕೊಳಗಾಗಿದ್ದೇನೆ. ಈ ವ್ಯಕ್ತಿಗಳು ನನ್ನನ್ನು ಬದುಕಲು ಬಿಡುತ್ತಿಲ್ಲ. ಈ ಕಾರಣಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’’ ಎಂದು ಗೋಪಾಲ್ ವೀಡಿಯೊದಲ್ಲಿ ತಿಳಿಸಿದ್ದಾರೆ. ಲೇವಾದೇವಿಗಾರರಾದ ರಾಕೇಶ್ ಭೂಪೇಂದ್ರ ಗಾಂಧಿ ಹಾಗೂ ಬಂಟಿ ಅರುಣ್ ಖಾರಾಲ್ ತನಗೆ ಕಿರುಕುಳ ನೀಡಿದ್ದಾರೆಂದು ಆತ ಆರೋಪಿಸಿದ್ದಾರೆ.
ಗೋಪಾಲ್ ವಾಮನ್ರಾವ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಅವರ ಸಹೋದರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗೋಪಾಲ್ ಅವರ ಸ್ಥಳೀಯ ಲೇವಾದೇವಿಗಾರ ರಾಕೇಶ್ ಭೂಪೇಂದ್ರ ಗಾಂಧಿಯಿಂದ ಶೇ.20ರ ದರದಲ್ಲಿ 1 ಲಕ್ಷ ರೂ. ಸಾಲ ಪಡೆದಿದ್ದರು. ಆನಂತರ ಅದನ್ನು ಬಡ್ಡಿಸಮೀಪ ಮರುಪಾವತಿಸಿದ್ದರು.
ಆದರೆ ಲೇವಾದೇವಿಗಾರರು ಅಲ್ಲಿಗೆ ಸುಮ್ಮನಾಗಲಿಲ್ಲ. ಇನ್ನೂ ಹೆಚ್ಚುವರಿಯಾಗಿ ಎಂಟು ಲಕ್ಷ ನೀಡುವಂತೆ ಅವರು ತನ್ನ ಸಹೋದರನನ್ನು ಪೀಡಿಸುತ್ತಿದ್ದರು. ಅಲ್ಲದೆ ಆತನ ಜಮೀನಿನ ಗಣನೀಯ ಭಾಗವನ್ನು ಅವರ ಹೆಸರಿಗೆ ನೋಂದಾಯಿಸಿಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರು ಸಲ್ಲಿಸಿದ ಬಳಿಕ ಪೊಲೀಸರು ರಾಕೇಶ್ ಭೂಪೇಂದ್ರ ಗಾಂಧಿ, ಸಚಿನ್ ಯಾನೆ ಬಂಟಿ ಅರುಣ್ ಖಾರಾಲ್, ದಿಲೀಪ್ ಅಪ್ಪರಾವ್ ದೇಶಮುಖ್ ಹಾಗೂ ಸಂತೋಷ್ ಬಲಿರಾಮ್ ಸಾವಂತ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇವರಲ್ಲಿ ರಾಕೇಶ್ ಭೂಪೇಂದ್ರ ಹಾಗೂ ಖಾರಾಲ್ ಅವರುಗಳು ಗೋಪಾಲ್ ವಾಮನರಾವ್ಗೆ ನಿರಂತರವಾಗಿ ಬೆದರಿಕೆಯೊಡ್ಡುತ್ತಿದ್ದರೆಂದು ಆಪಾದಿಸಲಾಗಿದೆ.
ರೈತ ಗೋಪಾಲ್ ವಾಮನ್ ರಾವ್ ಅವರ ಆತ್ಮಹತ್ಯೆ ಗ್ರಾಮದಲ್ಲಿ ವ್ಯಾಪಕ ಅಕ್ರೋಶಕ್ಕೆ ಕಾರಣವಾಗಿದೆ. ಸಾಲದ ಹೆಸರಿನಲ್ಲಿ ಜನಸಾಮಾನ್ಯರನ್ನು ಲೇವಾದೇವಿಗಾರರು ವ್ಯಾಪಕವಾಗಿ ಶೋಷಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.







