Maharashtra | ಕಾಂಗ್ರೆಸ್–ಎಐಎಮ್ಐಎಮ್ ಜೊತೆ ಮೈತ್ರಿ ಅಸ್ವೀಕಾರಾರ್ಹ: ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಫಡ್ನವೀಸ್ ಆಕ್ರೋಶ

ದೇವೇಂದ್ರ ಫಡ್ನವೀಸ್ | Photo Credit : PTI
ಮುಂಬೈ: ಅಂಬರ್ನಾಥ್ ನಗರಸಭೆಯಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಹಾಗೂ ಎಐಎಮ್ಐಎಮ್ನೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಅಸ್ವೀಕಾರಾರ್ಹ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಇಂಥ ಮೈತ್ರಿಕೂಟಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಅವರು ಬುಧವಾರ ಎಚ್ಚರಿಕೆ ನೀಡಿದ್ದಾರೆ.
“ಕಾಂಗ್ರೆಸ್ ಹಾಗೂ ಎಐಎಮ್ಐಎಮ್ ಜೊತೆ ಬಿಜೆಪಿ ಯಾವತ್ತೂ ಮೈತ್ರಿ ಏರ್ಪಡಿಸುವ ಪ್ರಶ್ನೆಯೇ ಇಲ್ಲ. ಈ ರೀತಿಯ ಕ್ರಮಗಳು ಪಕ್ಷದ ನಿಲುವಿಗೆ ವಿರುದ್ಧ. ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಫಡ್ನವೀಸ್ ಹೇಳಿದರು.
ಇದರ ನಡುವೆ, ಮಹಾರಾಷ್ಟ್ರದ ಅಂಬರ್ನಾಥ್ ನಗರಸಭೆಯಲ್ಲಿ ಮಂಗಳವಾರ ಅಚ್ಚರಿಯ ರಾಜಕೀಯ ಬೆಳವಣಿಗೆ ನಡೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕೌನ್ಸಿಲರ್ಗಳು ಪರಸ್ಪರ ಕೈಜೋಡಿಸಿ ಅಧಿಕಾರಕ್ಕೇರಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಬಣವನ್ನು ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ ಈ ಎರಡು ಪಕ್ಷಗಳು ಎಐಎಮ್ಐಎಮ್ ಹಾಗೂ ಇತರ ಪಕ್ಷಗಳೊಂದಿಗೆ ಸ್ಥಳೀಯ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿವೆ.
ಶಿವಸೇನೆಯ ಭದ್ರಕೋಟೆಗಳ ಪೈಕಿ ಒಂದಾಗಿರುವ ಅಂಬರ್ನಾಥ್ನಲ್ಲಿ ಆ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಎದುರಾಳಿ ಪಕ್ಷಗಳು ಸ್ಥಳೀಯ ಮೈತ್ರಿಕೂಟವನ್ನು ರಚಿಸಿವೆ. ಈ ನಗರಸಭೆ ಸಂಸದ ಶ್ರೀಕಾಂತ್ ಶಿಂದೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ.
ಡಿಸೆಂಬರ್ 20ರಂದು ನಡೆದ ನಗರಸಭಾ ಚುನಾವಣೆಯಲ್ಲಿ 60 ಸದಸ್ಯರ ಪಾಲಿಕೆಯಲ್ಲಿ ಶಿವಸೇನೆ (ಏಕನಾಥ ಶಿಂದೆ ಬಣ) 27 ಸ್ಥಾನಗಳನ್ನು ಗೆದ್ದು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ ಅದಕ್ಕೆ ನಾಲ್ಕು ಸ್ಥಾನಗಳ ಕೊರತೆಯಿತ್ತು. ಬಿಜೆಪಿ 14 ಸ್ಥಾನಗಳಲ್ಲಿ ಜಯ ಗಳಿಸಿದರೆ, ಕಾಂಗ್ರೆಸ್ 12 ಸ್ಥಾನಗಳನ್ನು ಪಡೆದುಕೊಂಡಿದೆ. ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದು, ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಸೇರಿ ‘ಅಂಬರ್ನಾಥ್ ವಿಕಾಸ್ ಅಘಾಡಿ’ ಎಂಬ ಮೈತ್ರಿಕೂಟವನ್ನು ರಚಿಸಿದ್ದು, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಇದರ ಮೂರನೇ ಪಾಲುದಾರವಾಗಿದೆ. ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಶಿವಸೇನೆಯ ಅಭ್ಯರ್ಥಿ ಮನೀಶಾ ವಾಲೇಕರ್ ಸೋಲನುಭವಿಸಿದ್ದು, ಬಿಜೆಪಿಯ ತೇಜಶ್ರೀ ಕರಂಜೂಲೆ ಪಾಟೀಲ್ ಆಯ್ಕೆಯಾಗಿದ್ದಾರೆ.
12 ಕೌನ್ಸಿಲರ್ಗಳನ್ನು ಅಮಾನತುಗೊಳಿಸಿದ ಕಾಂಗ್ರೆಸ್:
ಅಂಬರ್ನಾಥ್ ನಗರಸಭೆಯಲ್ಲಿ ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿರುವುದಕ್ಕಾಗಿ ಕಾಂಗ್ರೆಸ್ನ 12 ನೂತನ ಕೌನ್ಸಿಲರ್ಗಳನ್ನು ಪಕ್ಷವು ಬುಧವಾರ ಅಮಾನತುಗೊಳಿಸಿದೆ.
ಮೈತ್ರಿಯು ‘‘ಸಂಪೂರ್ಣ ತಪ್ಪು ಕೃತ್ಯ’’ವಾಗಿದೆ ಎಬುದಾಗಿ ಬಣ್ಣಿಸಿರುವ ಮಹಾರಾಷ್ಟ್ರ ಕಾಂಗ್ರೆಸ್, ಅಂಬರ್ನಾಥ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಿಸರ್ಜನೆಗೆ ಮತ್ತು ಅದರ ಅಧ್ಯಕ್ಷ ಹಾಗೂ ಹಿರಿಯ ನಾಯಕ ಪ್ರದೀಪ್ ಪಾಟೀಲ್ರ ಅಮಾನತಿಗೂ ಆದೇಶ ನೀಡಿದೆ.







