Maharastra | ಅಪಘಾತವಾದ ವಿಮಾನವು ಹಾರಾಟಕ್ಕೆ ಸಂಪೂರ್ಣ ಯೋಗ್ಯವಾಗಿತ್ತು: ವಿಎಸ್ಆರ್ ಏವಿಯೇಶನ್ ಮುಖ್ಯಸ್ಥ

Photo Credit : PTI
ಹೊಸದಿಲ್ಲಿ, ಜ. 28: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ನಡೆದ ವಿಮಾನ ಅಪಘಾತದಲ್ಲಿ ಸಾವಿಗೀಡಾದ ಬಳಿಕ, ದಿಲ್ಲಿಯ ವಿಮಾನ ಸಂಸ್ಥೆ ವಿಎಸ್ಆರ್ ಏವಿಯೇಶನ್ ನಿರ್ವಹಿಸುತ್ತಿದ್ದ ‘ಬೊಂಬಾರ್ಡಿಯರ್ ಲಿಯರ್ಜೆಟ್–45’ ವಿಮಾನದ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳು ಎದ್ದಿವೆ.
ಕಂಪೆನಿಯ ಈ ಮಾದರಿಯ ವಿಮಾನವೊಂದು ಅಪಘಾತಕ್ಕೀಡಾಗುತ್ತಿರುವುದು ಕಳೆದ ಮೂರು ವರ್ಷಗಳಲ್ಲಿ ಇದು ಎರಡನೇ ಬಾರಿ. 2023ರ ಸೆಪ್ಟೆಂಬರ್ನಲ್ಲಿ, ವಿಶಾಖಪಟ್ಟಣಂನಿಂದ ಮುಂಬೈಗೆ ಆರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇದೇ ಮಾದರಿಯ ವಿಮಾನವೊಂದು ಮುಂಬೈಯಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿತ್ತು. ಅದೃಷ್ಟವಶಾತ್, ಆ ಅಪಘಾತದಲ್ಲಿ ಯಾವುದೇ ಸಾವು–ನೋವು ಸಂಭವಿಸಿರಲಿಲ್ಲ.
ವಿಮಾನವು ‘ಸಂಪೂರ್ಣವಾಗಿ ಹಾರಾಟಕ್ಕೆ ಯೋಗ್ಯವಾಗಿತ್ತು’ ಎಂದು ವಿಎಸ್ಆರ್ ಏವಿಯೇಶನ್ ಮುಖ್ಯಸ್ಥ ವಿ.ಕೆ. ಸಿಂಗ್ ತಿಳಿಸಿದ್ದಾರೆ. ಕಡಿಮೆ ಗೋಚರತೆಯೇ ಅಪಘಾತಕ್ಕೆ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ಪೈಲಟ್ಗೆ ರನ್ವೇ ಕಾಣಿಸಲಿಲ್ಲ. ಹೀಗಾಗಿ, ಭೂಸ್ಪರ್ಶದ ವೇಳೆ ತಪ್ಪು ಸಂಭವಿಸಿದೆ’’ ಎಂದು ಅವರು ಹೇಳಿದ್ದಾರೆ.





