Maharashtra | ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 11 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ | Photo Credit : PTI
ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಶುಕ್ರವಾರ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಬಹುತೇಕರು ಕಾರ್ಮಿಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನಿಂದ ಸುಮಾರು 250 ಕಿಮೀ ದೂರದಲ್ಲಿರುವ ಲೋಟೆ ಪರುಶುರಾಮ್ ಎಂಐಡಿಸಿ (ರಾಸಾಯನಿಕ ವಲಯ)ಯಲ್ಲಿರುವ ಡಾ. ಖಾನ್ ಇಂಡಸ್ಟ್ರಿಯಲ್ ಕನ್ಸಲ್ಟೆಂಟ್ಸ್ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಡಾ. ಖಾನ್ ಇಂಡಸ್ಟ್ರಿಯಲ್ ಕನ್ಸಲ್ಟೆಂಟ್ಸ್ ಸಿಲಿಕಾ ಮೂಲದ ವಿಶೇಷ ರಾಸಾಯನಿಕಗಳು ಹಾಗೂ ರಾಸಾಯನಿಕ ಮಧ್ಯವರ್ತಿಗಳನ್ನು ತಯಾರಿಸುವುದರಲ್ಲಿ ಮುಂಚೂಣಿಯಲ್ಲಿದ್ದು, ಉಕ್ಕು, ಜವಳಿ, ಪೇಂಟ್ ಹಾಗೂ ಇಲೆಕ್ಟ್ರಾನಿಕ್ಸ್ ನಂತಹ ವೈವಿಧ್ಯಮಯ ಉದ್ಯಮಗಳಿಗೆ ತನ್ನ ರಾಸಾಯನಿಕಗಳನ್ನು ಪೂರೈಸುತ್ತದೆ.
ಈ ಸ್ಫೋಟದಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸ್ಫೋಟಕ್ಕೆ ಕಾರಣವೇನು ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.





