ಮಹಾರಾಷ್ಟ್ರ | ಅಪ್ರಾಪ್ತರು ಸೇರಿದಂತೆ 69 ಜೀತದಾಳುಗಳ ರಕ್ಷಣೆ; ಮೂವರ ಬಂಧನ

ಸಾಂದರ್ಭಿಕ ಚಿತ್ರ
ಪಾಲ್ಗಾರ್: ಮಹಾರಾಷ್ಟ್ರದ ಅಹಿಲ್ಯಾನಗರ್ ಜಿಲ್ಲೆಯಿಂದ ಅಪ್ರಾಪ್ತರು ಸೇರಿದಂತೆ 69 ಜೀತದಾಳುಗಳನ್ನು ರಕ್ಷಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸಾಮಾಜಿಕ ಹೋರಾಟಗಾರರು ನೀಡಿದ ಖಚಿತ ಮಾಹಿತಿಯ ಆಧಾರದಲ್ಲಿ ಕಲ್ಲು ಕತ್ತರಿಸುವ ಹಾಗೂ ಕುರಿ ಸಾಕಣಿಕೆ ಕೇಂದ್ರಗಳಲ್ಲಿ ಕೆಲಸ ಮಾಡುವ ಒತ್ತಾಯಕ್ಕೆ ಒಳಗಾದ ಈ ಜೀತದಾಳುಗಳನ್ನು ಗುರುವಾರ ರಕ್ಷಿಸಲಾಯಿತು. ಅವರನ್ನು ಪಾಲ್ಘಾರ್ ಜಿಲ್ಲೆಯ ಅವರ ಗ್ರಾಮಗಳಿಗೆ ಹಿಂದೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಾವು ಮೊದಲು ಕೆಲವು ಸ್ಥಳಗಳ ಮೇಲೆ ದಾಳಿ ನಡೆಸಿದೆವು ಹಾಗೂ 16 ಜೀತದಾಳುಗಳನ್ನು ರಕ್ಷಿಸಿದೆವು ಎಂದು ಅಹಿಲ್ಯಾನಗರ್ ಜಿಲ್ಲೆಯ ಕಾರ್ಮಿಕ ಅಧಿಕಾರಿ ಹೇಳಿದ್ದಾರೆ. ‘‘ಒಟ್ಟು 69 ಮಂದಿಯನ್ನು ಬಿಡುಗಡೆ ಮಾಡಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.
ಆರು ಮಂದಿ ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ. ಇತರ ಮೂವರನ್ನು ಪತ್ತೆ ಹಚ್ಚಲು ಹಾಗೂ ಬಂಧಿಸಲು ಕಾರ್ಯಾಚರಣೆ ಮುಂದುವರಿದಿದೆ ಎಂದು ಅಹಿಲ್ಯಾನಗರ್ ಜಿಲ್ಲೆಯ ಸಂಗಮ್ನೇರ್ನ ಡಿಎಸ್ಪಿ ಡಾ. ಕುನಾಲ್ ಸೋನಾವಾನೆ ತಿಳಿಸಿದ್ದಾರೆ.
ಆರೋಪಿಗಳು ಜೀತದಾಳುಗಳನ್ನು ಕಠಿಣವಾದ ಕುರಿ ಸಾಕಣೆ ಹಾಗೂ ಕಲ್ಲು ಕತ್ತರಿಸುವ ಕೆಲಸದಲ್ಲಿ ಬಲವಂತವಾಗಿ ತೊಡಗಿಸಿದ್ದರು. ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅವರ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡಿಸುತ್ತಿದ್ದರು ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.







