“ಹೇಳಿಕೆ ರಾಜಕೀಯ ಪ್ರೇರಿತವಲ್ಲ": ಮಾಜಿ ಸಿಎಂ ದೇಶಮುಖ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ಬಿಜೆಪಿ ನಾಯಕ ರವೀಂದ್ರ ಚವಾಣ್

ರವೀಂದ್ರ ಚವಾಣ್ , ದೇವೇಂದ್ರ ಫಡ್ನವಿಸ್ | Photo Credit : PTI
ಛತ್ರಪತಿ ಸಂಭಾಜಿನಗರ: ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಅವರ ನೆನಪುಗಳನ್ನು ‘ಅಳಿಸಿಹಾಕುವ’ ಕುರಿತು ತನ್ನ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿರಲಿಲ್ಲ ಎಂದು ಮಂಗಳವಾರ ಹೇಳಿರುವ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಅವರು, ತನ್ನ ಹೇಳಿಕೆಗಳು ಯಾವುದೇ ನೋವನ್ನುಂಟು ಮಾಡಿದ್ದರೆ ಕ್ಷಮಿಸುವಂತೆ ದಿವಂಗತ ನಾಯಕನ ಪುತ್ರ ಹಾಗೂ ಕಾಂಗ್ರೆಸ್ ನಾಯಕ ಅಮಿತ್ ದೇಶಮುಖ್ ಅವರನ್ನು ಕೋರಿಕೊಂಡಿದ್ದಾರೆ.
ಜ.15ರಂದು ನಡೆಯಲಿರುವ ಲಾತೂರು ಪೌರ ಸಂಸ್ಥೆ ಚುನಾವಣೆಗೆ ಮುನ್ನ ಸೋಮವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಚವಾಣ ಅವರು, ದಿವಂಗತ ಕಾಂಗ್ರೆಸ್ ದಿಗ್ಗಜ ದೇಶಮುಖ್ ಅವರ ನೆನಪುಗಳನ್ನು ಅವರ ಹುಟ್ಟೂರು ಲಾತೂರಿನಿಂದ ಅಳಿಸಿ ಹಾಕಲಾಗುವುದು ಎಂದು ಹೇಳಿದ್ದರು.
ಚವಾಣ್ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಕಾಂಗ್ರೆಸ್, ರಾಜ್ಯದ ಅಭಿವೃದ್ಧಿಗೆ ತನ್ನ ಜೀವನವನ್ನು ಮುಡುಪಿರಿಸಿದ್ದ ನಾಯಕನ ಕೊಡುಗೆಗಳನ್ನು ಕುಂದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು.
ಚವಾಣ್ ಹೇಳಿಕೆಗಳನ್ನು ಖಂಡಿಸಿದ್ದ ಅಮಿತ್ ದೇಶಮುಖ್ ಅವರು, ‘ಹೊರಗಿನವರು’ ಬಂದು ಹೇಳಿಕೆ ನೀಡಿದ್ದಾರೆ ಎಂಬ ಮಾತ್ರಕ್ಕೆ ತನ್ನ ತಂದೆಯ ನೆನಪುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ತನ್ನ ತಂದೆಯ ಹೆಸರನ್ನು ಅಳಿಸಲು ಸಾಧ್ಯವಿಲ್ಲ ಎಂದು ಬಾಲಿವುಡ್ ನಟ ರಿತೇಶ್ ದೇಶಮುಖ್ ಕೂಡ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.
ತನ್ನ ವಿವಾದಾತ್ಮಕ ಹೇಳಿಕೆಗಳ ಕುರಿತು ಮಂಗಳವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಚವಾಣ್, ‘ಈ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಾಗರಿಕ ಸೌಲಭ್ಯಗಳು ಕೇಂದ್ರಬಿಂದುವಾಗಿರಬೇಕು. ಸಮಸ್ಯೆಗಳನ್ನು ಯಾರು ತ್ವರಿತವಾಗಿ ಪರಿಹರಿಸುತ್ತಾರೆ ಎನ್ನುವುದು ಮುಖ್ಯ. ನಾನು ನನ್ನ ಹೇಳಿಕೆಯಲ್ಲಿ ವಿಲಾಸರಾವ್ ದೇಶಮುಖ್ ಅವರನ್ನು ಟೀಕಿಸಿಲ್ಲ. ಆದರೆ ಲಾತೂರಿನಲ್ಲಿ ಕಾಂಗ್ರೆಸ್ ಅವರ ಹೆಸರಿನಲ್ಲಿ ಮತಗಳನ್ನು ಯಾಚಿಸುತ್ತಿದೆ’ ಎಂದು ಹೇಳಿದರು.
‘ವಿಲಾಸರಾವ್ ದೇಶಮುಖ್ ಮಹಾನ ನಾಯಕರಾಗಿದ್ದರು ಮತ್ತು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ನನ್ನ ಹೇಳಿಕೆಯಿಂದ ನನ್ನ ಒಳ್ಳೆಯ ಸ್ನೇಹಿತರೂ ಆಗಿರುವ ಅವರ ಪುತ್ರನ ಭಾವನೆಗಳಿಗೆ ನೋವಾಗಿದ್ದರೆ ನಾನು ಅವರ ಕ್ಷಮೆ ಯಾಚಿಸುತ್ತೇನೆ. ನನ್ನ ಹೇಳಿಕೆಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು’ ಎಂದು ಹೇಳಿದರು.







