ಪರೀಕ್ಷಾ ಚೀಟಿಯಿಂದ ʼಜಾತಿʼ ಹಿಂಪಡೆದ ಮಹಾರಾಷ್ಟ್ರ ಶಿಕ್ಷಣ ಮಂಡಳಿ

ಸಾಂದರ್ಭಿಕ ಚಿತ್ರ
ಪುಣೆ: ವಿವಿಧ ವಲಯಗಳಿಂದ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ 10ನೇ ಮತ್ತು 12ನೇ ತರಗತಿ ಪರೀಕ್ಷಾ ಚೀಟಿಗಳಲ್ಲಿನ ಜಾತಿ ನಮೂದನ್ನು ಮಹಾರಾಷ್ಟ್ರ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಹಿಂಪಡೆದಿದೆ.
ಮುಂಬರುವ ಮಂಡಳಿ ಪರೀಕ್ಷೆಗಳಿಗೆ ಹಾಜರಾಗಲಿರುವ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಚೀಟಿಗಳಲ್ಲಿ ಮಹಾರಾಷ್ಟ್ರ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯು ಜಾತಿ ಪ್ರವರ್ಗದ ವಿಭಾಗವನ್ನು ನಮೂದಿಸಿದ್ದುದರಿಂದ ಭಾರಿ ವಿವಾದ ಸೃಷ್ಟಿಯಾಗಿತ್ತು. ಮಂಡಳಿಯ ಈ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು, ಶೈಕ್ಷಣಿಕ ತಜ್ಞರು ಹಾಗೂ ಇನ್ನಿತರ ತಜ್ಞರಿಂದ ತೀವ್ರ ಟೀಕೆ ಕೇಳಿ ಬಂದ ಬೆನ್ನಿಗೇ, ಆ ನಿರ್ಧಾರವನ್ನು ಹಿಂಪಡೆಯುವ ಸುತ್ತೋಲೆಯನ್ನು ಮಹಾರಾಷ್ಟ್ರ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಹೊರಡಿಸಿದೆ.
“ಸಾರ್ವತ್ರಿಕ ಭಾವನೆಗಳನ್ನು ಪರಿಗಣಿಸಿದ ನಂತರ, 12ನೇ ತರಗತಿ ಪರೀಕ್ಷಾ ಚೀಟಿಯಿಂದ ಜಾತಿ ಪ್ರವರ್ಗ ವಿಭಾಗವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಹೊಸ ಪರೀಕ್ಷಾ ಪ್ರವೇಶ ಚೀಟಿಯನ್ನು ಜನವರಿ 23ರಿಂದ ವಿತರಿಸಲಾಗುವುದು. ಈ ನಿರ್ಧಾರ 10ನೇ ತರಗತಿ ಪರೀಕ್ಷೆಗಳಿಗೂ ಅನ್ವಯವಾಗಲಿದ್ದು, ಜನವರಿ 20ರಿಂದ ವಿದ್ಯಾರ್ಥಿಗಳಿಗೆ ಹೊಸ ಪರೀಕ್ಷಾ ಪ್ರವೇಶ ಚೀಟಿಯನ್ನು ವಿತರಿಸಲಾಗುವುದು” ಎಂದು ಶನಿವಾರ ಮಹಾರಾಷ್ಟ್ರ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಿದೆ.