ವರನಿಗೆ ಸಿಬಿಲ್ ಸ್ಕೋರ್ ಇಲ್ಲವೆಂದು ವಿವಾಹವನ್ನೇ ರದ್ದುಗೊಳಿಸಿದ ವಧುವಿನ ಕುಟುಂಬ!

ಸಾಂದರ್ಭಿಕ ಚಿತ್ರ Photo Credit | J community
ಮುಂಬೈ: ಹಿಂದೆಲ್ಲ ವರನ ಗುಣ, ಹಿನ್ನೆಲೆ, ವರಮಾನ, ವೃತ್ತಿ, ಕುಟುಂಬದ ಹಿನ್ನೆಲೆಯ ಆಧಾರದಲ್ಲಿ ವಧುವಿನ ಕಡೆಯವರು ವಿವಾಹ ಮಾತುಕತೆಯನ್ನು ಅಂತಿಮಗೊಳಿಸುತ್ತಿದ್ದರು. ಆದರೆ, ಇದೀಗ ಕಾಲ ಬದಲಾಗಿದೆ. ಮಹಾರಾಷ್ಟ್ರದ ವಧುವಿನ ಕಡೆಯ ಕುಟುಂಬವೊಂದು ವರನಿಗೆ ಸಿಬಿಲ್ ಸ್ಕೋರ್ ಇಲ್ಲವೆಂದು ವಿವಾಹ ಕಾರ್ಯಕ್ರಮವನ್ನೇ ರದ್ದುಗೊಳಿಸಿರುವ ವಿಚಿತ್ರ ಘಟನೆ ವರದಿಯಾಗಿದೆ.
The Times of India ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಈ ಘಟನೆಯು ಮಹಾರಾಷ್ಟ್ರದ ಮುರ್ತಿಝಾಪುರ್ ನಲ್ಲಿ ನಡೆದಿದೆ.
ವಿವಾಹ ಸಿದ್ಧತೆಯ ಕೊನೆಯ ಹಂತದಲ್ಲಿ ವಧು ಮತ್ತು ವರನ ಕುಟುಂಬಗಳ ನಡುವೆ ಪರಸ್ಪರ ಔಪಚಾರಿಕ ಭೇಟಿ ನಡೆದಾಗ, ವಧುವಿನ ಚಿಕ್ಕಪ್ಪ ವರನ ಸಿಬಿಲ್ ಸ್ಕೋರ್ ಪರಿಶೀಲಿಸೋಣ ಎಂದು ತಮ್ಮ ಕುಟುಂಬಕ್ಕೆ ಸಲಹೆ ನೀಡಿದ್ದಾರೆ.
ಸಿಬಿಲ್ ಸ್ಕೋರ್ ಮೂರು ಅಂಕಿಯ ಸಂಖ್ಯೆಯಾಗಿದ್ದು, ಯಾವುದೇ ವ್ಯಕ್ತಿಯ ಸಾಲದ ಇತಿಹಾಸವನ್ನು ಸಾರಾಂಶ ರೂಪದಲ್ಲಿ ತೋರಿಸುತ್ತದೆ. ಈ ಸ್ಕೋರ್ 300ರಿಂದ 900ರ ನಡುವೆ ಇದ್ದು, ಯಾವುದೇ ವ್ಯಕ್ತಿ 900ರ ಹತ್ತಿರ ಇದ್ದಷ್ಟೂ ಸಾಲ ನೀಡಿಕೆ ಸಂಸ್ಥೆಗಳು ಅಂತಹ ವ್ಯಕ್ತಿಯ ಸಾಲದ ಅರ್ಜಿಯನ್ನು ಪರಿಗಣಿಸುವ ಸಾಧ್ಯತೆ ಅಧಿಕವಾಗಿರುತ್ತದೆ.
ವರನ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಿದಾಗ, ಆತನ ಸಿಬಿಲ್ ಸ್ಕೋರ್ ಕಡಿಮೆ ಇರುವುದು ಪತ್ತೆಯಾಗಿದ್ದು, ಆತ ಸಾಲದಲ್ಲಿದ್ದು, ಆರ್ಥಿಕವಾಗಿ ಸ್ಥಿರವಾಗಿಲ್ಲ ಎಂಬುದನ್ನು ಸೂಚಿಸಿದೆ.
ಒಂದು ವೇಳೆ ವರನು ಇಷ್ಟೊಂದು ಸಾಲದ ಹೊರೆಯಲ್ಲಿದ್ದರೆ, ಆತ ತನ್ನ ಪತ್ನಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ವಧುವಿನ ಚಿಕ್ಕಪ್ಪ ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಲಾಗಿದೆ. ವಧುವಿನ ಕುಟುಂಬದವರು ತಮ್ಮ ಸಂಬಂಧಿಕರ ಈ ಅಂಶವನ್ನು ಒಪ್ಪಿಕೊಂಡಿದ್ದು, ವಿವಾಹವನ್ನು ರದ್ದುಗೊಳಿಸಿದ್ದಾರೆ.
ಇಂತಹ ಸಾಮಾನ್ಯ ಸಂಗತಿಗಳಿಗೆ ವಿವಾಹಗಳು ರದ್ದಾಗಿರುವ ಪ್ರಕರಣ ಇದೇ ಮೊದಲಲ್ಲ. ಇತ್ತೀಚೆಗೆ ಹೊಸ ದಿಲ್ಲಿಯಲ್ಲಿ ವರನು ಬಾಲಿವುಡ್ ಗೀತೆ ‘ಚೋಲಿ ಕೆ ಪೀಛೆ ಕ್ಯಾ ಹೈ’ಗೆ ನೃತ್ಯ ಮಾಡಿದ್ದರಿಂದ ವಧುವಿನ ತಂದೆಯು ಆಕ್ರೋಶಗೊಂಡ ಘಟನೆಯು ವರದಿಯಾಗಿತ್ತು.
ವರನ ಸ್ನೇಹಿತರು ನೃತ್ಯದಲ್ಲಿ ಪಾಲ್ಗೊಳ್ಳುವಂತೆ ವರನಿಗೆ ಒತ್ತಾಯ ಮಾಡಿದ್ದರು. ಹೀಗಾಗಿ ಹೀಗಾಗಿ ಗೀತೆಗೆ ನೃತ್ಯ ಮಾಡುವುದನ್ನು ತಡೆಯಲಾಗದ ವರನು ಅವರೊಂದಿಗೆ ನೃತ್ಯದಲ್ಲಿ ಪಾಲ್ಗೊಂಡಿದ್ದನು. ಈ ಸಂದರ್ಭದಲ್ಲಿ ಅಲ್ಲಿದ್ದ ಜನರು ವರನನ್ನು ಹುರಿದುಂಬಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಆದರೆ, ವರನ ಈ ವರ್ತನೆಯಿಂದ ಆಕ್ರೋಶಗೊಂಡ ವಧುವಿನ ತಂದೆಯು, ‘ಇದು ಅಸಭ್ಯ ವರ್ತನೆ” ಎಂದು ಹರಿಹಾಯ್ದು, ವಿವಾಹ ಸಮಾರಂಭವನ್ನೇ ಸ್ಥಗಿತಗೊಳಿಸಿರುವ ಘಟನೆ ನಡೆದಿತ್ತು.







