ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿದೇಶಿ ದೇಣಿಗೆ ಪಡೆಯಲು ಅನುಮತಿ ನೀಡಿದ ಕೇಂದ್ರ ಸರಕಾರ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (PTI)
ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿದೇಶಿ ದೇಣಿಗೆ ಸ್ವೀಕರಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ.
ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA)- 2010ರ ಅಡಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ.
ನೈಸರ್ಗಿಕ ವಿಕೋಪಗಳು, ಅಪಘಾತಗಳು, ಕೋಮು ಗಲಭೆಗಳು, ಭಯೋತ್ಪಾದಕ ದಾಳಿಗಳು ಸಂಭವಿಸದಾಗ ಅಥವಾ ವೈದ್ಯಕೀಯ ಮತ್ತು ಶೈಕ್ಷಣಿಕ ಸಹಾಯದ ಅಗತ್ಯವಿರುವವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ನೀಡಲಾಗುತ್ತದೆ.
ವಿದೇಶಿ ನಿಧಿಯನ್ನು ಸ್ವೀಕರಿಸಲು ರಾಜ್ಯವೊಂದಕ್ಕೆ ಅನುಮತಿ ದೊರೆತಿರುವುದು ಇದೇ ಮೊದಲು. ಈ ಮೊದಲು ದೇಶೀಯ ದೇಣಿಗೆಯನ್ನು ಮಾತ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುತ್ತಿತ್ತು.
2018ರಲ್ಲಿ ಕೇರಳದಲ್ಲಿ ಪ್ರವಾಹ ಸಂಭವಿಸಿದಾಗ ಭಾರತ ವಿದೇಶಿ ನೆರವನ್ನು ನಿರಾಕರಿಸಿತ್ತು. ಆದರೆ, ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಪರಿಹಾರ ನಿಧಿ(CMRF)ಯನ್ನು ಬಾಂಬೆ ಪಬ್ಲಿಕ್ ಟ್ರಸ್ಟ್ಸ್ ಕಾಯ್ದೆ-1950ರ ಅಡಿಯಲ್ಲಿ ಟ್ರಸ್ಟ್ ಆಗಿ ನೋಂದಾಯಿಸಲಾಗಿದೆ. ಇದನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ ಸರಕಾರ ನಿರ್ವಹಿಸುತ್ತದೆ.







