ಮಹಾರಾಷ್ಟ್ರ| ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಪುತ್ರಿಯನ್ನೇ ಕೊಂದ ತಂದೆ !

Photo Credit : thehansindia
ಮುಂಬೈ, ಫೆ. 2: ಮಹಾರಾಷ್ಟ್ರದಲ್ಲಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರು ಮಕ್ಕಳ ನಿಯಮದಿಂದ ಹೊರಬರಲು ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳಲ್ಲಿ ಒಬ್ಬರನ್ನು ಹತ್ಯೆಗೈದಿದ್ದಾನೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರು ಗ್ರಾಮದ ನಿವಾಸಿ ಪಾಂಡುರಂಗ ಕೊಂಡ್ಮಂಗಲೆ (28)ತನ್ನ 6 ವರ್ಷದ ಪುತ್ರಿಯನ್ನು ತೆಲಂಗಾಣದ ನಿಝಾಮಾಬಾದ್ ಜಿಲ್ಲೆಯ ಕಾಲುವೆಯೊಂದಕ್ಕೆ ತಳ್ಳಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪಾಂಡುರಂಗ ಹಾಗೂ ಗ್ರಾಮದ ಸರಪಂಚ ಗಣೇಶ್ ರಾಮಚಂದ್ರ ಶಿಂಧೆಯನ್ನು ಬಂಧಿಸಲಾಗಿದೆ ಎಂದು ನಿಝಾಮಾಬಾದ್ ಪೊಲೀಸರು ಮಂಗಳವಾರ ಪ್ರಕಟಿಸಿದ್ದಾರೆ.
ಬಾಲಕಿಯ ಮೃತದೇಹ ಯೆಡಪಳ್ಳಿಯಲ್ಲಿರುವ ನಿಝಾಮ್ ಸಾಗರ್ ಕಾಲುವೆಯಲ್ಲಿ ಕೆಲವು ದಿನಗಳ ಹಿಂದೆ ಪತ್ತೆಯಾಗಿತ್ತು. ತನಿಖೆಯಲ್ಲಿ ಆಕೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕೆರೂರು ಗ್ರಾಮದ ನಿವಾಸಿ ಪ್ರಾಚಿ (6) ಎಂದು ಗುರುತಿಸಲಾಗಿತ್ತು ಎಂದು ನಿಝಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯ ತಂದೆ ಪಾಂಡುರಂಗ ಕೊಡ್ಮಂಗಲೆಯನ್ನು ಬಂಧಿಸಿದ್ದರು. ಪ್ರಾಚಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ ಎಂದು ಆತ ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ. ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸಿದಾಗಿ ಬಾಲಕಿಯನ್ನು ಹತ್ಯೆಗೈದಿರುವುದನ್ನು ಒಪ್ಪಿಕೊಂಡ.
ಕೆರೂರು ಗ್ರಾಮದಲ್ಲಿ ಕ್ಷೌರದ ಅಂಗಡಿ ನಡೆಸುತ್ತಿದ್ದ ಪಾಂಡುರಂಗ ಮುಂಬರುವ ಪಂಚಾಯತ್ ಚುನಾವಣೆಯ ಸ್ಪರ್ಧಿಸಲು ಉತ್ಸುಕನಾಗಿದ್ದ. ಆತನಿಗೆ 3 ವರ್ಷದ ಪುತ್ರ ಹಾಗೂ 6 ವರ್ಷದ ಅವಳಿ ಪುತ್ರಿಯರು ಇದ್ದರು. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರು ಸ್ಫರ್ದಿಸುವಂತಿಲ್ಲ. ಈ ನಿಯಮದ ಕಾರಣಕ್ಕೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಆತ ಅನರ್ಹನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪಾಂಡುರಂಗ ತನ್ನ ಗೆಳೆಯ ಹಾಗೂ ಗ್ರಾಮದ ಸರಪಂಚ ಗಣೇಶ್ ಶಿಂಧೆಯೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿದ್ದ.
ಆರಂಭದಲ್ಲಿ ಪಾಂಡುರಂಗ ಪುತ್ರಿಯನ್ನು ದತ್ತು ನೀಡಲು ಚಿಂತಿಸಿದ್ದ. ಆದರೆ, ಇದರಿಂದ ಆತನ ಉದ್ದೇಶ ಈಡೇರುವಂತಿರಲಿಲ್ಲ. ಯಾಕೆಂದರೆ, ಜನನ ಪ್ರಮಾಣ ಪತ್ರದಲ್ಲಿ ಪ್ರಾಚಿ ಆತನ ಪುತ್ರಿ ಎಂದು ನೋಂದಣಿಯಾಗಿತ್ತು.
ಪ್ರಾಚಿಯನ್ನು ತ್ಯಜಿಸುವ ಕುರಿತು ಕೂಡ ಪಾಂಡುರಂಗ ಯೋಚಿಸಿದ್ದ. ಆದರೆ, ಆಕೆ ಹಿಂದಿರುಗಿದರೆ ಉಂಟಾಗುವ ಪರಿಣಾಮಗಳ ಬಗ್ಗೆ ಆತ ಚಿಂತಿತನಾಗಿದ್ದ. ಅನಂತರ ಆತ ಪ್ರಾಚಿಯನ್ನು ಹತ್ಯೆಗೈದು, ಅಪಘಾತವೆಂದು ಬಿಂಬಿಸಲು ನಿರ್ಧರಿಸಿದ ಎಂದು ಪೊಲೀಸರು ಹೇಳಿದ್ದಾರೆ.







