ಮಹಾರಾಷ್ಟ್ರ ವೈದ್ಯೆ ಆತ್ಮಹತ್ಯೆ ಪ್ರಕರಣ | ಸಾಂಸ್ಥಿಕ ಹತ್ಯೆ, ಸರಕಾರವು ಅಪರಾಧಿಗಳನ್ನು ರಕ್ಷಿಸುತ್ತಿದೆ: ರಾಹುಲ್ ಗಾಂಧಿ ಆರೋಪ

ರಾಹುಲ್ ಗಾಂಧಿ |Photo Credit : PTI
ಹೊಸದಿಲ್ಲಿ,ಅ.26: ಮಹಾರಾಷ್ಟ್ರದ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಆತ್ಮಹತ್ಯೆ ಘಟನೆಯನ್ನು ರವಿವಾರ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಇದು ಯಾವುದೇ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನು ಕದಡಲೇಬೇಕಾದ ದುರಂತವಾಗಿದೆ ಎಂದು ಬಣ್ಣಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಸರಕಾರವು ಅಪರಾಧಿಗಳಿಗೆ ಅಧಿಕಾರದಿಂದ ರಕ್ಷಣೆ ದೊರೆಯುವ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇತರರ ನೋವುಗಳನ್ನು ನಿವಾರಿಸಲು ಆಶಿಸಿದ್ದ ಭರವಸೆದಾಯಕ ಯುವವೈದ್ಯೆ ಭ್ರಷ್ಟ ವ್ಯವಸ್ಥೆ ಮತ್ತು ಅಧಿಕಾರದಲ್ಲಿ ಬೇರೂರಿರುವ ಅಪರಾಧಿಗಳ ಹಿಂಸೆಗೆ ಬಲಿಯಾಗಿದ್ದಾರೆ. ಅಪರಾಧಿಗಳಿಂದ ಸಾರ್ವಜನಿಕರನ್ನು ರಕ್ಷಿಸಬೇಕಾದ ಅಧಿಕಾರಿಗಳೇ ಈ ಅಮಾಯಕ ಮಹಿಳೆಯ ಮೇಲೆ ಅತ್ಯಾಚಾರ ನಡೆಸುವ ಮತ್ತು ಶೋಷಿಸುವ ಮೂಲಕ ಆಕೆಯ ವಿರುದ್ಧ ಅತ್ಯಂತ ಘೋರ ಕೃತ್ಯವನ್ನು ಎಸಗಿದ್ದಾರೆ. ವರದಿಗಳ ಪ್ರಕಾರ ಬಿಜೆಪಿಗೆ ಸಂಬಂಧಿಸಿದ ಕೆಲವು ಪ್ರಭಾವಿ ವ್ಯಕ್ತಿಗಳು ಕೂಡ ಭ್ರಷ್ಟಾಚಾರಕ್ಕಾಗಿ ಆಕೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದರು ಎಂದು ರಾಹುಲ್ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಈ ಪ್ರಕರಣವು ಈ ಬಿಜೆಪಿ ಸರಕಾರದ ಅಮಾನವೀಯ ಮತ್ತು ನಿರ್ದಯ ಮುಖವನ್ನು ಬಹಿರಂಗಗೊಳಿಸಿದೆ ಎಂದು ಹೇಳಿರುವ ರಾಹುಲ್, ಮೃತವೈದ್ಯೆಯ ಕುಟುಂಬಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಆಕೆಗೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
‘ನ್ಯಾಯಕ್ಕಾಗಿ ಈ ಹೋರಾಟದಲ್ಲಿ ನಾವು ಸಂತ್ರಸ್ತೆಯ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಭಾರತದ ಪ್ರತಿಯೊಬ್ಬ ಹೆಣ್ಣುಮಗಳಿಗೂ ಇನ್ನು ಭೀತಿಯಿಲ್ಲ,ನ್ಯಾಯ ಮಾತ್ರ’. ಎಂದು ಅವರು ಟ್ವೀಟಿಸಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿಯಾಗಿದ್ದು, ಸತಾರಾ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆ ಫಲಟಣ ಪಟ್ಟಣದ ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಅಂಗೈ ಮೇಲೆ ಬರೆದಿದ್ದ ಆತ್ಮಹತ್ಯಾ ಟಿಪ್ಪಣಿಯಲ್ಲಿ ಆಕೆ ಪಿಎಸ್ಐ ಗೋಪಾಲ ಬದನೆ ತನ್ನ ಮೇಲೆ ಹಲವಾರು ಸಲ ಅತ್ಯಾಚಾರ ಎಸಗಿದ್ದರು ಮತ್ತು ಸಾಫ್ಟ್ವೇರ್ ಇಂಜಿನಿಯರ್ ಪ್ರಶಾಂತ ಬನಕರ್ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.







