ಮಹಾರಾಷ್ಟ್ರ | ಕಾರ್ಖಾನೆಯಲ್ಲಿ ಸ್ಫೋಟ: ಓರ್ವ ಮೃತ್ಯು, ನಾಲ್ವರಿಗೆ ಗಾಯ

ಸಾಂದರ್ಭಿಕ ಚಿತ್ರ (PTI)
ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಸಂಜೆ 7.30 ರ ಸುಮಾರಿಗೆ ಲಿಂಬಾನಿ ಸಾಲ್ಟ್ ಇಂಡಸ್ಟ್ರೀಸ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಲೋಹ ಮತ್ತು ಆಮ್ಲ ಮಿಶ್ರಣದ ಸಮಯದಲ್ಲಿ ಐದು ಕಾರ್ಮಿಕರು ಸ್ಥಳದಲ್ಲಿದ್ದರು, ಇದು ಸ್ಫೋಟಕ್ಕೆ ಕಾರಣವಯಿತು ಎಂದು ಪಾಲ್ಘರ್ ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ವಿವೇಕಾನಂದ ಕದಮ್ ಹೇಳಿದ್ದಾರೆ.
ಕಾರ್ಮಿಕರಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು. ಇನ್ನಿಬ್ಬರು ತೀವ್ರ ಸುಟ್ಟಗಾಯಗಳಿಗೆ ಒಳಗಾಗಿದ್ದರು ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸ್ವಲ್ಪ ದೂರದಲ್ಲಿ ನಿಂತಿದ್ದ ಇನ್ನೂ ಇಬ್ಬರು ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಸೇರಿದಂತೆ ತುರ್ತು ತಂಡಗಳು ತ್ವರಿತವಾಗಿ ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದವು.
ಸ್ಥಳೀಯ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದು, ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







