ಮಹಾರಾಷ್ಟ್ರ: ಬೆಳೆ ನಷ್ಟಕ್ಕೆ ಕೇವಲ 6 ರೂ. ಪರಿಹಾರ!

ಸಾಂದರ್ಭಿಕ ಚಿತ್ರ |Photo Credit : PTI
ಛತ್ರಪತಿ ಸಂಭಾಜಿ ನಗರ್, ನ. 5: ಭಾರೀ ಮಳೆ ಹಾಗೂ ನಂತರ ಸಂಭವಿಸಿದ ನೆರೆಯ ಪರಿಣಾಮ ಉಂಟಾದ ಬೆಳೆ ನಷ್ಟಕ್ಕೆ ಸರಕಾರದಿಂದ ಕೇವಲ 6 ರೂ. ಪರಿಹಾರ ದೊರೆತಿದೆ ಎಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರ್ ಜಿಲ್ಲೆಯ ರೈತರೋರ್ವರು ಬುಧವಾರ ತಿಳಿಸಿದ್ದಾರೆ.
ಪೈಠಣ ತಾಲೂಕಿನ ದವರವಾಡಿ ಗ್ರಾಮದ ನಿವಾಸಿಯಾಗಿರುವ ರೈತ ದಿಗಂಬರ ಸುಧಾಕರ ತಂಗ್ಡೆ ಅವರು ಉದ್ಧವ್ ಠಾಕ್ರೆ ಭೇಟಿಯ ಸಂದರ್ಭ ಪೈಠಣದ ನಂದರ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಉದ್ಧವ್ ಠಾಕ್ರೆ ಅವರು ರೈತರನ್ನು ಭೇಟಿ ಮಾಡಲು ಹಾಗೂ ಅವರೊಂದಿಗೆ ಮಾತುಕತೆ ನಡೆಸಲು ಮರಾಠವಾಡ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದಾರೆ.
‘‘ನನಗೆ ಕೇವಲ 2 ಎಕರೆ ಭೂಮಿ ಇದೆ. ನನ್ನ ಬ್ಯಾಂಕ್ ಖಾತೆಗೆ 6 ರೂ. ಜಮಾ ಆಗಿದೆ ಎಂದು ಸಂದೇಶ ಸ್ವೀಕರಿಸಿದ್ದೆ. ಸರಕಾರ ಇಷ್ಟು ಕಡಿಮೆ ಹಣ ಪಾವತಿಸಿರುವುದಕ್ಕೆ ನಾಚಿಕೆಯಾಗಬೇಕು. ಈ ಹಣ ಒಂದು ಕಪ್ ಟೀ ಕುಡಿಯಲು ಕೂಡ ಸಾಕಾಗುವುದಿಲ್ಲ. ಸರಕಾರ ರೈತರನ್ನು ತಮಾಷೆ ಮಾಡುತ್ತಿದೆ’’ ಎಂದು ತಂಗ್ಡೆ ಹೇಳಿದ್ದಾರೆ.
‘‘ನಮಗೆ ಸಾಲ ಮನ್ನಾದ ಅಗತ್ಯವಿದೆ. ಆದರೆ ಸರಕಾರ ನನ್ನ ಖಾತೆಗೆ 6 ರೂಪಾಯಿ ಜಮಾ ಮಾಡುವ ಮೂಲಕ ರೈತರನ್ನು ತಮಾಷೆ ಮಾಡುತ್ತಿದೆ. ನಾವು ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲ. ಉದ್ಧವ್ ಠಾಕ್ರೆ ಅವರು ತನ್ನ ಅಧಿಕಾರ ಅವಧಿಯಲ್ಲಿ ಸಾಲ ಮನ್ನಾ ಮಾಡಿದ್ದಾರೆ. ಈ ಸರಕಾರ ಕೂಡ ಈಗಾಗಲೇ ಸಾಲ ಮನ್ನಾ ಘೋಷಿಸಿದೆ. ಆದರೆ, ಇದುವರೆಗೆ ಮಾಡಿಲ್ಲ’’ ಎಂದು ಅವರು ಹೇಳಿದರು.
ರೈತರು ಕಳೆದ ಎರಡು ತಿಂಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದರು. ಅವರು ಈಗ ಈ ಹಣವನ್ನು ಕಳುಹಿಸಿದ್ದಾರೆ ಎಂದು ತಂಗ್ಡೆ ತಿಳಿಸಿದ್ದಾರೆ.
ಇತ್ತೀಚೆಗೆ ರಾಜ್ಯದ ಅಕೋಲಾ ಜಿಲ್ಲೆಯ ಕೆಲವು ಹಳ್ಳಿಗಳ ರೈತರು ಭಾರೀ ಮಳೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಕೇಂದ್ರ ವಿಮಾ ಯೋಜನೆ ಅಡಿಯಲ್ಲಿ ಕೇವಲ 3 ರೂ. ನಿಂದ 21ರೂ. ವರೆಗೆ ಪರಿಹಾರ ಪಡೆದಿದ್ದರು. ಈ ಪರಿಹಾರವನ್ನು ಅವರು ನಮ್ಮ ಸಂಕಷ್ಟದ ಅವಮಾನ ಹಾಗೂ ಅಣಕ ಎಂದು ಹೇಳಿದ್ದರು.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನ (ಪಿಎಂಎಫ್ಬಿವೈ) ಅಡಿಯಲ್ಲಿ ಪರಿಹಾರ ಸ್ವೀಕರಿಸಿದ ರೈತರು ಅನಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು ಹಾಗೂ ಪರಿಹಾರವನ್ನು ಚೆಕ್ ಮೂಲಕ ಹಿಂದಿರುಗಿಸಿದ್ದರು.







