ಎಸ್ಒಪಿಗೆ ಹೊಂದಿಕೆಯಾಗದ ಜನನ, ಮರಣ ಪ್ರಮಾಣಪತ್ರಗಳನ್ನು ರದ್ದುಗೊಳಿಸಲು ಮಹಾರಾಷ್ಟ್ರ ಸರಕಾರ ಆದೇಶ

Photo Credit : onlinedigitalseva.com
ಮುಂಬೈ: ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಹೋಲಿಕೆಯಾಗದೆ, ತಪ್ಪಾಗಿ ವಿತರಿಸಲಾಗಿರುವ ಎಲ್ಲ ಜನನ ಮತ್ತು ಮರಣ ಪ್ರಮಾಣ ಪತ್ರಗಳ ತುರ್ತು ಪರಾಮರ್ಶೆ ನಡೆಸಿ, ಅಂಥವುಗಳನ್ನು ರದ್ದುಗೊಳಿಸುವಂತೆ ಮಹಾರಾಷ್ಟ್ರ ಸರಕಾರ ಆದೇಶಿಸಿದೆ.
ಜನನ ವಿವರಗಳನ್ನು ತಿದ್ದುಪಡಿ ಮಾಡಲು ಆಧಾರ್ ಕಾರ್ಡ್ ಅನ್ನು ಸೂಕ್ತ ದಾಖಲೆಯನ್ನಾಗಿ ಪರಿಗಣಿಸುವ ಕ್ರಮವನ್ನು ಸ್ಥಗಿತಗೊಳಿಸಬೇಕು ಎಂದು ಸೋಮವಾರ ಅಧಿಕಾರಿಗಳಿಗೆ ಬಿಡುಗಡೆ ಮಾಡಿರುವ ಸರಕಾರಿ ನಿರ್ಣಯದಲ್ಲಿ ಸೂಚಿಸಲಾಗಿದೆ.
ಅಮರಾವತಿ, ಜಲ್ನಾ, ಛತ್ರಪತಿ ಸಂಭಾಜಿನಗರ್, ಲಾತೂರ್, ಅಕೋಲಾ, ಪರ್ಭಾನಿ, ಬೀಡ್ ಮತ್ತು ನಾಶಿಕ್ ಜಿಲ್ಲೆಗಳು ಸೇರಿದಂತೆ ಹದಿನಾಲ್ಕು ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದ ವಿಳಂಬಿತ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಅಸಮರ್ಪಕವಾಗಿ ವಿತರಣೆಯಾಗಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಈಗಾಗಲೇ ತಪ್ಪಾಗಿ ವಿತರಿಸಲಾಗಿರುವ ಪ್ರಮಾಣ ಪತ್ರಗಳನ್ನು ಪತ್ತೆ ಹಚ್ಚಿ, ಅವನ್ನು ಮತ್ತೆ ಪರಿಶೀಲಿಸಬೇಕು ಎಂದು ಕಂದಾಯ, ಆರೋಗ್ಯ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸರಕಾರ ನಿರ್ದೇಶನ ನೀಡಿದೆ. ಕಾನೂನು ಮಾನದಂಡಗಳೊಂದಿಗೆ ಹೊಂದಾಣಿಕೆಯಾಗದ ಪ್ರಮಾಣ ಪತ್ರಗಳನ್ನು ಆದ್ಯತೆಯ ಮೇರೆಗೆ ರದ್ದುಗೊಳಿಸಲೇಬೇಕು ಹಾಗೂ ನಾಗರಿಕ ನೋಂದಣಿ ವ್ಯವಸ್ಥೆ ಪೋರ್ಟಲ್ನಲ್ಲಿರುವ ನೋಂದಣಿಗಳನ್ನು ತೆಗೆದು ಹಾಕಬೇಕು ಎಂದೂ ಸರಕಾರ ಆದೇಶಿಸಿದೆ.





