ಮಹಾರಾಷ್ಟ್ರ ಹಜ್ ಸಮಿತಿಗೆ ಮೊದಲ ಬಾರಿಗೆ ಮುಸ್ಲಿಮೇತರ ಸಿಇಒ ನೇಮಕ: ವ್ಯಾಪಕ ಚರ್ಚೆ

File Photo: PTI/AP
ಮುಂಬೈ: ಮಹಾರಾಷ್ಟ್ರ ರಾಜ್ಯ ಹಜ್ ಸಮಿತಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಸ್ಲಿಮೇತರ ವ್ಯಕ್ತಿಯನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕ ಮಾಡಲಾಗಿದ್ದು, ಇದು ಚರ್ಚೆಗಳಿಗೆ ಗ್ರಾಸವಾಗಿದೆ ಎಂದು freepressjournal.in ವರದಿ ಮಾಡಿದೆ.
ಐಎಎಸ್ ಅಧಿಕಾರಿ ಮನೋಜ್ ಜಾಧವ್ ಅವರು ಶೇಖ್ ಇಬ್ರಾಹಿಂ ಶೇಖ್ ಅಸ್ಲಾಂ ಅವರ ಉತ್ತರಾಧಿಕಾರಿಯಾಗಿ ಸಮಿತಿಯ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ರಾಜ್ಯ ಹಜ್ ಸಮಿತಿಯು ಸೌದಿ ಸರಕಾರದಿಂದ ಸ್ವೀಕರಿಸಿದ ಕೋಟಾವನ್ನು ಅನುಷ್ಠಾನಿಸುವ ಮೂಲಕ ಭಾರತೀಯ ನಾಗರಿಕರಿಗೆ ವಾರ್ಷಿಕ ಹಜ್ ಯಾತ್ರೆಯನ್ನು ಸುಗಮಗೊಳಿಸುತ್ತದೆ. ಭಾರತದಿಂದ ತೆರಳುವ ಸುಮಾರು 1.75 ಲಕ್ಷ ಯಾತ್ರಿಗಳನ್ನು ಹಜ್ ಸಮಿತಿಯು ನಿರ್ವಹಿಸಿದರೆ ಕೋಟಾದ ಕಾಲುಭಾಗದಷ್ಟು ಯಾತ್ರಿಗಳು ಖಾಸಗಿ ಹಜ್ ನಿರ್ವಾಹಕರ ಮೂಲಕ ಸೌದಿಗೆ ತೆರಳುತ್ತಾರೆ.
ಜಾಧವ್ ಅವರ ನೇಮಕಾತಿಯು ಮಕ್ಕಾ ಮತ್ತು ಮದೀನಾಕ್ಕೆ ವಾರ್ಷಿಕ ಹಜ್ ಯಾತ್ರೆಯ ಮೇಲ್ವಿಚಾರಣೆ ನಡೆಸುವ ಆಡಳಿತಾತ್ಮಕ ಹುದ್ದೆಯಲ್ಲಿ ಮುಸ್ಲಿಮೇತರ ಅಧಿಕಾರಿಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಧರ್ಮಗುರುಗಳ ಕಳವಳ
ಅನುಭವಿ ಸರಕಾರಿ ಅಧಿಕಾರಿಗೆ ಆಡಳಿತದ ಜ್ಞಾನವಿರುತ್ತದೆ, ಆದರೆ ಅವರು ಹಜ್ ಯಾತ್ರೆಯ ಆಚರಣೆಗಳು ಮತ್ತು ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳುತ್ತರೆಯೇ ಎಂಬ ಬಗ್ಗೆ ಸಂದೇಹಗಳಿವೆ ಎಂದು ಹೇಳಿದ ಜಾಮಾ ಮಸೀದಿಯ ಟ್ರಸ್ಟಿ ಶುಐಬ್ ಖತೀಬ್ ಅವರು, ಸೌದಿ ಅಧಿಕಾರಿಗಳು ಮುಸ್ಲಿಮೇತರರಿಗೆ ಹಜ್ ಯಾತ್ರೆಯ ಕೇಂದ್ರವನ್ನು ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಭಾರತೀಯ ಯಾತ್ರಿಕರು ಪವಿತ್ರ ಸ್ಥಳಗಳಲ್ಲಿ ಎದುರಿಸುವ ಸಮಸ್ಯೆಗಳನ್ನು ಗ್ರಹಿಸಲು ಅಧಿಕಾರಿಗೆ ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು.
ಮುಸ್ಲಿಮೇತರ ಅಧಿಕಾರಿಯನ್ನು ನೇಮಕ ಮಾಡಿರುವುದು ಅರ್ಥವಾಗಿಲ್ಲ. ಹಜ್ ಯಾತ್ರೆ ಮುಸ್ಲಿಮರ ಧಾರ್ಮಿಕ ಕರ್ತವ್ಯವಾಗಿದ್ದು,ಇಸ್ಲಾಮ್ ಧರ್ಮದ ಐದನೇ ಕಡ್ಡಾಯ ಸ್ತಂಭವಾಗಿದೆ. ಮಹಾರಾಷ್ಟ್ರ ರಾಜ್ಯ ಹಜ್ ಸಮಿತಿಯ ಸಿಇಒ ಆಗಿ ಮುಸ್ಲಿಮೇತರ ವ್ಯಕ್ತಿಯ ನೇಮಕವು ಅತ್ಯಂತ ಖಂಡನೀಯ ಮತ್ತು ಆಕ್ಷೇಪಾರ್ಹವಾಗಿದ್ದು, ಯಾವುದೇ ಸಂದರ್ಭದಲ್ಲಿಯೂ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಮುಂಬೈನ ಮುಸ್ಲಿಮ್ ನಿವಾಸಿಯೋರ್ವರು ಹೇಳಿದರು.
ಹಜ್ ಯಾತ್ರೆಯ ವೇಳಾಪಟ್ಟಿ
2026ರ ಹಜ್ ಯಾತ್ರೆಯನ್ನು ಚಂದ್ರದರ್ಶನವನ್ನು ಅವಲಂಬಿಸಿ ಮೇ 25ರಿಂದ 30ರ ನಡುವೆ ನಿಗದಿಗೊಳಿಸಲಾಗಿದೆ. ಸೌದಿ ಅರೇಬಿಯಾ ಸರಕಾರವು ಯಾತ್ರೆಗಾಗಿ ನಿಯಮಗಳು ಮತ್ತು ಸೌಲಭ್ಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಯಾತ್ರಿಕರು ಶಿಬಿರಗಳಲ್ಲಿ ಅಡಿಗೆ ಮಾಡಿಕೊಳ್ಳುವಂತಿಲ್ಲ ಮತ್ತು ಇಲೆಕ್ಟ್ರಿಕ್ ಕುಕರ್ಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.
ಐದಾರು ದಿನಗಳಿಗಾಗಿ ಔಷಧಿಗಳ ಜೊತೆಗೆ ಕೊಡೆ,ತಂಪು ಕನ್ನಡಕ, ಪ್ಲಾಸ್ಟಿಕ್ ಚಾಪೆ ಮತ್ತು ಪ್ರೋಟಿನ್ ಬಾರ್ಗಳನ್ನು ತರುವಂತೆ ಯಾತ್ರಿಗಳಿಗೆ ಸೂಚಿಸಲಾಗಿದೆ.







