ಪ್ರವಾಹ ತಪ್ಪಿಸಲು ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆಗೆ ಕರ್ನಾಟಕಕ್ಕೆ ಮಹಾರಾಷ್ಟ್ರದ ಸೂಚನೆ

ಆಲಮಟ್ಟಿ ಜಲಾಶಯ
ಮುಂಬೈ : ಪಶ್ಚಿಮ ಮಹಾರಾಷ್ಟ್ರದ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹವನ್ನು ತಪ್ಪಿಸಲು ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ನೀರನ್ನು ಬಿಡುಗಡೆಗೊಳಿಸುವಂತೆ ಕರ್ನಾಟಕ ಸರಕಾರವನ್ನು ಆಗ್ರಹಿಸಿದೆ ಎಂದು ಉಪಮುಖ್ಯಮಂತ್ರಿ ಅಜಿತ ಪವಾರ್ ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅಧಿಕೃತವಾಗಿ ಲಾಲ್ ಬಹಾದೂರ್ ಶಾಸ್ತ್ರಿ ಅಣೆಕಟ್ಟು ಎಂದು ಕರೆಯಲಾಗುವ ಆಲಮಟ್ಟಿ ಅಣೆಕಟ್ಟು ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಜಲವಿದ್ಯುತ್ ಯೋಜನೆಯಾಗಿದೆ.
ಆಲಮಟ್ಟಿ ಜಲಾಶಯದಿಂದ ನೀರಿನ ಬಿಡುಗಡೆಯನ್ನು ಈಗಿನ 2.5 ಲಕ್ಷ ಕ್ಯುಸೆಕ್ಗಳಿಂದ 3 ಲಕ್ಷ ಕ್ಯುಸೆಕ್ಗಳಿಗೆ ಹೆಚ್ಚಿಸುವಂತೆ ಮಹಾರಾಷ್ಟ್ರ ಸರಕಾರವು ಕರ್ನಾಟಕವನ್ನು ಕೇಳಿಕೊಂಡಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿನ ಕೊಯ್ನಾ ಜಲಾಶಯದಲ್ಲಿ ನೀರಿನ ಸಂಗ್ರಹ ಅತ್ಯಂತ ಕಡಿಮೆ ಅವಧಿಯಲ್ಲಿ ಆರು ಟಿಎಂಸಿಗಳಷ್ಟು ಹೆಚ್ಚಾಗಿದ್ದು,ಅದು ಈಗಾಗಲೇ ಮುಕ್ಕಾಲು ಭಾಗ ಭರ್ತಿಯಾಗಿದೆ. ಇದರರ್ಥ ನಾವು ಕೊಯ್ನಾ ಜಲಾಶಯದಿಂದ ನೀರನ್ನು ಬಿಡಬೇಕಾಗುತ್ತದೆ ಮತ್ತು ಇದರಿಂದಾಗಿ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚುತ್ತದೆ ಎಂದು ಪವಾರ್ ಹೇಳಿದರು.
ಕೊಯ್ನಾ ಜಲಾಶಯವು ಕೊಯ್ನಾ ನದಿಗೆ ನಿರ್ಮಿಸಲಾಗಿರುವ ಅಣೆಕಟ್ಟು ಆಗಿದ್ದು, 105 ಟಿಎಂಸಿ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಕೊಯ್ನಾ ಸಾಂಗ್ಲಿ ನಗರ ಮತ್ತು ಕೊಲ್ಲಾಪುರ ಜಿಲ್ಲೆಗಳ ಮೂಲಕ ದಕ್ಷಿಣಕ್ಕೆ ಹರಿದು ಕರ್ನಾಟಕವನ್ನು ಪ್ರವೇಶಿಸುವ ಕೃಷ್ಣಾ ನದಿಯ ಅತ್ಯಂತ ದೊಡ್ಡ ಉಪನದಿಯಾಗಿದೆ.
ಸತಾರಾದ ಪಶ್ಚಿಮ ಘಟ್ಟಗಳಲ್ಲಿ ಅತ್ಯಂತ ಎತ್ತರದ ಸ್ಥಳಗಳಲ್ಲೊಂದಾಗಿರುವ ಮಹಾಬಲೇಶ್ವರದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ 400 ಮಿ.ಮೀ.ಗೂ ಹೆಚ್ಚಿನ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದರು.
ಕೊಲ್ಲಾಪುರದ ವರ್ನಾ ಜಲಾಶಯದಿಂದ ಸುಮಾರು 11,000 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡುವ ಅಗತ್ಯವಿದೆ ಮತ್ತು ಈ ನೀರು ಮುಂದಕ್ಕೆ ಕೃಷ್ಣಾ ನದಿಯನ್ನು ಸೇರುತ್ತದೆ. ಆದ್ದರಿಂದ ತಮ್ಮ ನೀರಿನ ಹೊರಹರಿವನ್ನು ಹೆಚ್ಚಿಸುವಂತೆ ನಾವು ಆಲಮಟ್ಟಿ ಅಣೆಕಟ್ಟಿನ ಅಧಿಕಾರಗಳನ್ನು ಕೋರಿಕೊಂಡಿದ್ದೇವೆ ಎಂದು ಪವಾರ್ ತಿಳಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಜನರ ಸಾವುಗಳಿಗೆ ಕಾರಣವಾಗಿದ್ದು, ಸಾವಿರಾರು ಕೋಟಿ ರೂ.ಗಳ ಕೃಷಿ ಹಾನಿ ಸಂಭವಿಸಿದೆ.







