ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ | ಶೇ.50 ಕೋಟಾ ಮಿತಿಯನ್ನು ಉಲ್ಲಂಘಿಸಿದ ಸಂಸ್ಥೆಗಳ ಫಲಿತಾಂಶಗಳು ತೀರ್ಪನ್ನು ಅವಲಂಬಿಸಿರಲಿವೆ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | Photo Credit : sci.gov.in
ಹೊಸದಿಲ್ಲಿ,ನ.25: ಶೇ.50ರ ಮೀಸಲಾತಿ ಮಿತಿಯ ಉಲ್ಲಂಘನೆಯಾಗಿರುವ ಮಹಾರಾಷ್ಟ್ರದ 57 ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಅಂತಿಮ ಫಲಿತಾಂಶಗಳು ಪ್ರಕರಣದಲ್ಲಿ ತನ್ನ ತೀರ್ಪನ್ನು ಅವಲಂಬಿಸಿರಲಿವೆ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾ.ಜಾಯಮಲ್ಯ ಬಾಗ್ಚಿ ಅವರ ಪೀಠವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೀಸಲಾತಿ ವಿಷಯ ಕುರಿತು ವಿಚಾರಣೆಯನ್ನು ನ.28ಕ್ಕೆ ಮುಂದೂಡಿತು.
ಮಹಾರಾಷ್ಟ್ರ ಸರಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಮೀಸಲಾತಿಗಳ ಮೇಲಿನ ಶೇ.50 ಮಿತಿಯ ಪಾಲನೆ ಕುರಿತು ರಾಜ್ಯ ಚುನಾವಣಾ ಆಯೋಗದೊಂದಿಗೆ (ಎಸ್ಇಸಿ) ಸಮಾಲೋಚಿಸಲು ಸಮಯಾವಕಾಶವನ್ನು ಕೋರಿದ್ದರು.
ಇತರ ಹಿಂದುಳಿದ ವರ್ಗಗಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ನೀಡುವ ವಿಷಯವನ್ನು ತಾನು ನಿರ್ಧರಿಸುವವರೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಮುಂದೂಡುವಂತೆ ಪೀಠವು ನ.19ರಂದು ರಾಜ್ಯ ಸರಕಾರಕ್ಕೆ ಸೂಚಿಸಿತ್ತು.
242 ನಗರಸಭೆಗಳು ಮತ್ತು 42 ನಗರ ಪಂಚಾಯತ್ಗಳು ಸೇರಿದಂತೆ ಒಟ್ಟು 288 ಸ್ಥಳೀಯ ಸಂಸ್ಥೆಗಳಿಗೆ ಡಿ.2ರಂದು ಚುನಾವಣೆ ನಡೆಸಲು ಈಗಾಗಲೇ ಅಧಿಸೂಚನೆಯನ್ನು ಹೊರಡಿಸಲಾಗಿದ್ದು,ಈ ಪೈಕಿ 57 ಸಂಸ್ಥೆಗಳಲ್ಲಿ ಮೀಸಲಾತಿ ಮಿತಿಯನ್ನು ಉಲ್ಲಂಘಿಸಲಾಗಿದೆ ಎಂದು ಎಸ್ಇಸಿ ಪರ ಹಿರಿಯ ವಕೀಲ ಬಲ್ಬೀರ್ ಸಿಂಗ್ ಅವರು ಮಂಗಳವಾರ ಪೀಠಕ್ಕೆ ತಿಳಿಸಿದರು.
ಇದನ್ನು ಗಮನಕ್ಕೆ ತೆಗೆದುಕೊಂಡ ಪೀಠವು,ಈ 57 ಸಂಸ್ಥೆಗಳ ಚುನಾವಣೆಗಳ ಅಂತಿಮ ಫಲಿತಾಂಶಗಳು ತನ್ನ ತೀರ್ಪನ್ನು ಅವಲಂಬಿಸಿರಲಿವೆ ಎಂದು ತಿಳಿಸಿತು.







