Maharashtra ಸ್ಥಳೀಯ ಸಂಸ್ಥೆ ಚುನಾವಣೆ | ನಾಗ್ಪುರ ನಗರ ಪಾಲಿಕೆಯ 84 ವಾರ್ಡ್ಗಳಲ್ಲಿ ಬಿಜೆಪಿ ಮುನ್ನಡೆ; ಕಾಂಗ್ರೆಸ್ 41, ಎಐಎಂಐಎಂ 4 ವಾರ್ಡ್ಗಳಲ್ಲಿ ಮುನ್ನಡೆ

Photo Credit : ANI
ಮುಂಬೈ: ನಾಗ್ಪುರ ನಗರ ಪಾಲಿಕೆ ಚುನಾವಣೆಯ ಮತಎಣಿಕೆ ಶನಿವಾರ ಬೆಳಗ್ಗಿನಿಂದ ನಡೆಯುತ್ತಿದ್ದು, ಇತ್ತೀಚಿನ ವರದಿಗಳ ಪ್ರಕಾರ ಬಿಜೆಪಿ 84 ವಾರ್ಡ್ಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 41 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ 4 ವಾರ್ಡ್ಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಇನ್ನಿತರ 28 ನಗರ ಪಾಲಿಕೆಗಳೊಂದಿಗೆ 151 ಸದಸ್ಯ ಬಲದ ನಾಗ್ಪುರ ನಗರ ಪಾಲಿಕೆಗೆ ಗುರುವಾರ ಮತದಾನ ನಡೆದಿತ್ತು.
ನಾಗ್ಪುರ ನಗರ ಪಾಲಿಕೆಯಲ್ಲಿ ನಾಲ್ಕು ಸದಸ್ಯರ ಸಮಿತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಈ ವ್ಯವಸ್ಥೆಯಡಿ ಪ್ರತಿ ಸಮಿತಿಯು ನಾಲ್ಕು ವಾರ್ಡ್ ಗಳನ್ನು ಹೊಂದಿರುತ್ತದೆ. ಎಐಎಂಐಎಂನ ನಾಲ್ವರು ಅಭ್ಯರ್ಥಿಗಳು ಈ ಸಮಿತಿಗಳಲ್ಲಿ ಮುನ್ನಡೆಯಲ್ಲಿದ್ದಾರೆ.
ಆಲಿಷಾ ಖಾನ್, ರೇಶ್ಮಾ ನಂದಗಾವ್ಲಿ, ಸೋಫಿಯಾ ಶೇಖ್ ಹಾಗೂ ಪವನ್ ಕೋಯೆ ಅವರು ಮುನ್ನಡೆಯಲ್ಲಿರುವ ಎಐಎಂಐಎಂ ಅಭ್ಯರ್ಥಿಗಳಾಗಿದ್ದಾರೆ. ಮುಸ್ಲಿಮರ ಜನಸಂಖ್ಯೆ ಗಮನಾರ್ಹವಾಗಿರುವ ಆಸಿನ್ ನಗರ ವಲಯದ ವಾರ್ಡ್ ಸಂಖ್ಯೆ 3ರಲ್ಲಿ ಅವರು ತಮ್ಮ ಪ್ರತಿಸ್ಪರ್ಧಿಗಳ ಎದುರು ಮುನ್ನಡೆಯಲ್ಲಿದ್ದಾರೆ.
ನಾಗ್ಪುರ ನಗರ ಪಾಲಿಕೆಯ ಆರು ಸ್ಥಾನಗಳಲ್ಲಿ ಎಐಎಂಐಎಂ ಸ್ಪರ್ಧಿಸಿದ್ದು, ಪಕ್ಷದ ಮುಖ್ಯಸ್ಥ ಹಾಗೂ ಲೋಕಸಭಾ ಸಂಸದ ಅಸದುದ್ದೀನ್ ಉವೈಸಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು.
ನಾಗ್ಪುರ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 143 ಸ್ಥಾನಗಳಲ್ಲಿ ಹಾಗೂ ಅದರ ಮಿತ್ರಪಕ್ಷ ಶಿವಸೇನೆ ಎಂಟು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. 151 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.
ಕಳೆದ ಬಾರಿ ನಡೆದ ನಾಗ್ಪುರ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 108 ಸ್ಥಾನಗಳಲ್ಲಿ, ಕಾಂಗ್ರೆಸ್ 28 ಸ್ಥಾನಗಳಲ್ಲಿ, ಬಿಎಸ್ಪಿ 10 ಸ್ಥಾನಗಳಲ್ಲಿ, ಅವಿಭಜಿತ ಶಿವಸೇನೆ 2 ಸ್ಥಾನಗಳಲ್ಲಿ ಹಾಗೂ ಒಗ್ಗೂಡಿದ ಎನ್ಸಿಪಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.







