ಮಹಾರಾಷ್ಟ್ರ ಸ್ಥಳೀಯಾಡಳಿತ ಚುನಾವಣೆ: ಆಡಳಿತಾರೂಢ ಮಹಾಯುತಿ ಜಯಭೇರಿ

Image Source : PTI
ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ನಿರ್ಣಾಯಕ ಗೆಲುವನ್ನು ಸಾಧಿಸಿದೆ ಹಾಗೂ ಬಿಜೆಪಿಯು ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. 288 ಮಹಾರಾಷ್ಟ್ರ ನಗರಪರಿಷತ್ ಹಾಗೂ ಗ್ರಾಮಪಂಚಾಯತ್ಗಳ ಫಲಿತಾಂಶವನ್ನು ಪ್ರಕಟಿಸಲಾಗಿದ್ದು,129ರಲ್ಲಿ ಬಿಜೆಪಿ ಜಯಗಳಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಶಿವಸೇನಾ ಸೋಲನ್ನು ಒಪ್ಪಿಕೊಂಡಿದ್ದು, ಮಹಾಯುತಿಯ ಗೆಲುವಿಗೆ ಚುನಾವಣಾ ಆಯೋಗವು ಅನುಕೂಲ ಮಾಡಿಕೊಟ್ಟಿದೆ ಎಂದು ದೂರಿವೆ.
ಸುಮಾರು ಹತ್ತು ವರ್ಷಗಳ ಬಳಿಕ 264 ಮುನ್ಸಿಪಲ್ ಕೌನ್ಸಿಲ್ಗಳು ಹಾಗೂ ನಗರಪಂಚಾಯತ್ ಗಳಿಗೆ ಡಿಸೆಂಬರ್ 2ರಂದು ಮತದಾನವಾಗಿತ್ತು. ಡಿಸೆಂಬರ್ 20ರಂದು ಉಳಿದ 20ಕ್ಕೂ ಅಧಿಕ ಮುನ್ಸಿಪಲ್ ಮಂಡಳಿಗಳು ಹಾಗೂ ನಗರಪಂಚಾಯತ್ ಗಳಿಗೆ ಚುನಾವಣೆಗಳು ನಡೆದಿದ್ದವು. ಬೆಳಗ್ಗೆ 10 ಗಂಟೆಗೆ ಮತದಾನ ಆರಂಭವಾಗಿತ್ತು. ಲಾಡ್ಕಿ ಬಹಿನ್ ಯೋಜನಾ ಸೇರಿದಂತೆ ಮಹಿಳಾ ಕಲ್ಯಾಣ ಯೋಜನೆಯಡಿ ವಿತರಿಸಲಾಗುತ್ತಿದ್ದ ಆರ್ಥಿಕ ನೆರವಿನ ಭಾಗಶಃ ಪಾವತಿ ಹಾಗೂ ರೈತರಿಗೆ ಆರ್ಥಿಕ ನೆರವಿನ ಕೊರತೆ ಇವೆಲ್ಲಾ ಕಾರಣಗಳಿಂದಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಪ್ರಬಲ ಹೋರಾಟ ನೀಡಲಿವೆಯೆಂಬ ರಾಜಕೀಯ ವೀಕ್ಷಕರು ವಿಶ್ಲೇಷಿಸಿದರು. ಆದರೆ ಅವೆಲ್ಲವನ್ನೂ ಹುಸಿ ಮಾಡಿದ ಮಹಾಯುತಿ ಮೈತ್ರಿಕೂಟವು ವಿಜಯಪತಾಕೆ ಹಾರಿಸಿವೆ.
ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ (ಯುಬಿಟಿ) ನಾಯಕ ಅಂಬಾದಾಸ್ ದಾನ್ವೆ ಅವರು ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ನೆರವಾಗಿದ್ದಕ್ಕಕಾಗಿ ಚುನಾವಣಾ ಆಯೋಗಕ್ಕೆ ಅಭಿನಂದಿಸುವುದಾಗಿ ವ್ಯಂಗ್ಯವಾಡಿದ್ದಾರೆ.
‘‘ಮಹಾವಿಕಾಸ್ಅಗಾಡಿಯ ಅಂಗಪಕ್ಷಗಳಿಗೆ ಹೋಲಿಸಿದರೆ ಮಹಾಯುತಿ ಮೈತ್ರಿಕೂಟವು ಅತ್ಯಧಿಕ ಸಂಖ್ಯೆಯ ಸ್ಥಾನಗಳನ್ನು ಗೆದ್ದಿದೆ. ತೋಳ್ಬಲ ಹಾಗೂ ಧನಬಲ ಪ್ರಯೋಗಿಸಿದ ಆಡಳಿತಾರೂಢ ಪಕ್ಷಗಳಿಗೆ ಧನ್ಯವಾದಗಳು’’ ಎಂದವರು ಕಟಕಿಯಾಡಿದ್ದಾರೆ.







