ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ 'ಮರಾಠಿ' ಭಾಷೆ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (PTI)
ಮುಂಬೈ: ಸರಕಾರಿ ಕಚೇರಿಗಳು ಹಾಗೂ ಅರೆ ಸರಕಾರಿ ಸಂಸ್ಥೆಗಳಲ್ಲಿನ ಎಲ್ಲ ಅಧಿಕೃತ ಸಂವಹನಗಳನ್ನು ಮರಾಠಿ ಭಾಷೆಯಲ್ಲೇ ನಡೆಸುವುದನ್ನು ಕಡ್ಡಾಯಗೊಳಿಸಿ ಸೋಮವಾರ ಮಹಾರಾಷ್ಟ್ರ ಸರಕಾರ ಅಧಿಸೂಚನೆ ಹೊರಡಿಸಿದೆ.
ರಾಜ್ಯ ಯೋಜನಾ ಇಲಾಖೆ ಹೊರಡಿಸಿರುವ ಈ ಅಧಿಸೂಚನೆ ಪ್ರಕಾರ, ಈ ನಿರ್ದೇಶನವನ್ನು ಪಾಲಿಸದ ಸರಕಾರಿ ಉದ್ಯೋಗಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ ಎಂದು India Today ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದೇಶ ಪಾಲನೆಯಾಗದ ಕುರಿತು ಸೂಕ್ತ ಕ್ರಮಕ್ಕಾಗಿ ಕಚೇರಿಗಳು ಹಾಗೂ ಇಲಾಖಾ ಮುಖ್ಯಸ್ಥರ ಬಳಿ ದೂರು ದಾಖಲಿಸಬಹುದಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಅಧಿಸೂಚನೆಯ ಪ್ರಕಾರ, ಎಲ್ಲ ಮಾದರಿಯ ಸಂವಹನಗಳು, ಅಧಿಕೃತ ಸೂಚನಾ ಫಲಕಗಳು ಹಾಗೂ ರಾಜ್ಯದಲ್ಲಿನ ದಾಖಲೀಕರಣಕ್ಕೆ ಈ ಕಡ್ಡಾಯ ಆದೇಶ ಅನ್ವಯವಾಗಲಿದೆ.
“ವಿದೇಶೀಯರು ಹಾಗೂ ಮರಾಠಿಯೇತರ ರಾಜ್ಯಗಳ ಸಂದರ್ಶಕರನ್ನು ಹೊರತುಪಡಿಸಿ, ಉಳಿದೆಲ್ಲರೊಂದಿಗೆ ಅಧಿಕಾರಿಗಳು ಮರಾಠಿಯಲ್ಲೇ ಸಂವಾದ ನಡೆಸಬೇಕು” ಎಂದೂ ಅಧಿಸೂಚನೆಯಲ್ಲಿ ಆದೇಶಿಸಲಾಗಿದೆ.
ಎಲ್ಲ ಸರಕಾರಿ ಕಚೇರಿಗಳು, ಮಹಾನಗರ ಪಾಲಿಕೆಗಳು, ರಾಜ್ಯ ನಿಗಮಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ಕಂಪ್ಯೂಟರ್ ಕೀಬೋರ್ಡ್ ಹಾಗೂ ಪ್ರಿಂಟರ್ ಗಳ ಮೇಲೆ ರೋಮನ್ ಲಿಪಿಯೊಂದಿಗೆ ಮರಾಠಿ ದೇವನಾಗರಿ ಲಿಪಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು” ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಹೊಸ ಉದ್ಯಮಗಳೂ ಕೂಡಾ ಇಂಗ್ಲಿಷ್ ಗೆ ಭಾಷಾಂತರಿಸದೆ ಮರಾಠಿ ಭಾಷೆಯಲ್ಲೇ ಹೆಸರನ್ನು ನೋಂದಾಯಿಸಬೇಕು ಎಂದೂ ಅಧಿಸೂಚನೆಯಲ್ಲಿ ನಿರ್ದೇಶನ ನೀಡಲಾಗಿದೆ.
“ಮಹಾರಾಷ್ಟ್ರ ಸರಕಾರ ಅನುಮೋದನೆ ನೀಡಿರುವ ಕಂಪನಿಗಳು, ಮಂಡಳಿಗಳು, ನಿಗಮಗಳು, ಅರೆ ಸರಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಇತ್ಯಾದಿಗಳು ಮರಾಠಿ ದಿನಪತ್ರಿಕೆಗಳಿಗೆ ತಮ್ಮ ಎಲ್ಲ ಜಾಹೀರಾತುಗಳು, ಟೆಂಡರ್ ಗಳು, ನೋಟಿಸ್ ಗಳು ಇತ್ಯಾದಿಗಳನ್ನು ಮರಾಠಿ ಭಾಷೆಯಲ್ಲೇ ನೀಡಬೇಕು” ಎಂದು ಅಧಿಸೂಚನೆಯಲ್ಲಿ ಸೂಚನೆ ನೀಡಲಾಗಿದೆ.
ಮರಾಠಿ ಭಾಷೆಯ ರಕ್ಷಣೆ, ಸಂರಕ್ಷಣೆ, ಪ್ರಚಾರ, ಪ್ರಸರಣ ಹಾಗೂ ಅಭಿವೃದ್ಧಿಯನ್ನು ಖಾತರಿ ಪಡಿಸಲು ಸಾರ್ವಜನಿಕ ವ್ಯವಹಾರಗಳಲ್ಲಿ ಮರಾಠಿ ಭಾಷೆಯನ್ನು ಬಳಸಬೇಕು ಎಂಬ ಶಿಫಾರಸಿಗೆ ಕಳೆದ ವರ್ಷ ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು ಎಂದು ವರದಿಯಾಗಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ► https://whatsapp.com/channel/0029VaA8ju86LwHn9OQpEq28