ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ರಾಜೀನಾಮೆ

ಧನಂಜಯ್ ಮುಂಡೆ (PTI)
ಮುಂಬೈ: ಡಿಸೆಂಬರ್ ತಿಂಗಳಲ್ಲಿ ಬೀಡ್ ಜಿಲ್ಲೆಯಲ್ಲಿ ನಡೆದಿದ್ದ ಸರಪಂಚನೊಬ್ಬನ ಹತ್ಯೆ ಪ್ರಕರಣದಲ್ಲಿ ತಮ್ಮ ಆಪ್ತ ಹಿಂಬಾಲಕ ವಾಲ್ಮಿಕ್ ಕರಡ್ ಬಂಧನಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಧನಂಜಯ್ ಮುಂಡೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಸ್ಸಜೋಗ್ ಗ್ರಾಮದ ಸರಪಂಚ ಸಂತೋಷ್ ದೇಶ್ ಮುಖ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಮ್ಮ ಆಪ್ತ ಹಿಂಬಾಲಕ ವಾಲ್ಮಿಕ್ ಕರಡ್ ನನ್ನು ಪೊಲೀಸರು ಬಂಧಿಸಿದ ನಂತರ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೂಚನೆಯ ಮೇರೆಗೆ ಧನಂಜಯ್ ಮುಂಡೆ ರಾಜೀನಾಮೆ ಸಲ್ಲಿಸಿದ್ದಾರೆ.
ಧನಂಜಯ್ ಮುಂಡೆಯ ರಾಜೀನಾಮೆಯನ್ನು ಅಂಗೀಕರಿಸಿದ್ದು, ಅದನ್ನು ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರಿಗೆ ರವಾನಿಸಲಾಗಿದೆ ಎಂದು ದೇವೇಂದ್ರ ಫಡ್ನವಿಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸರಪಂಚನ ಹತ್ಯೆ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಯಿಂದ ಉದ್ಭವಿಸಲಿರುವ ರಾಜಕೀಯ ಪರಿಸ್ಥಿತಿ ಹಾಗೂ ಪೊಲೀಸರ ತನಿಖೆಯಲ್ಲಿ ಕರಡ್ ಪಾತ್ರದ ಕುರಿತು ಕಂಡು ಬಂದಿರುವ ಅಂಶಗಳ ಕುರಿತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಚರ್ಚೆ ನಡೆಸಿದ ನಂತರ, ದೇವೇಂದ್ರ ಫಡ್ನವಿಸ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.
49 ವರ್ಷದ ಧನಂಜಯ್ ಮುಂಡೆ ಎನ್ಸಿಪಿ (ಅಜಿತ್ ಪವಾರ್ ಬಣ) ಶಾಸಕರಾಗಿದ್ದು, ಬೀಡ್ ಜಿಲ್ಲೆಯ ಪಾರ್ಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ, ಬಿಜೆಪಿಯ ಹಿರಿಯ ನಾಯಕ ದಿವಂಗತ ಗೋಪಿನಾಥ್ ಮುಂಡೆ ಅವರ ಸೋದರಳಿಯ ಹಾಗೂ ಮಹಾರಾಷ್ಟ್ರ ಸಚಿವೆ ಪಂಕಜ್ ಮುಂಡೆ ಅವರ ಸೋದರ ಸಂಬಂಧಿಯೂ ಆಗಿದ್ದಾರೆ. 2013ರಲ್ಲಿ ಧನಂಜಯ್ ಮುಂಡೆ ಎನ್ಸಿಪಿಗೆ ಸೇರ್ಪಡೆಯಾಗಿದ್ದರು. 2023ರಲ್ಲಿ ಶರದ್ ಪವಾರ್ ನೇತೃತ್ವದ ಎನ್ಸಿಪಿ ವಿಭಜನೆಗೊಂಡ ನಂತರ, ಅಜಿತ್ ಪವಾರ್ ಬಣದೊಂದಿಗೆ ಗುರುತಿಸಿಕೊಂಡಿದ್ದರು. ಈ ಹಿಂದೆ ಅವರು ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಉದ್ಧವ್ ಠಾಕ್ರೆ ಸರಕಾರದಲ್ಲಿ ರಾಜ್ಯ ದರ್ಜೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.







