ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ | ಮತದಾರರ ಪಟ್ಟಿಯಲ್ಲಿ ಸಚಿವರ ಹೆಸರೇ ನಾಪತ್ತೆ!

Screengrab:X/@PTI_News
ಮುಂಬೈ: ಮಹಾರಾಷ್ಟ್ರ ಅರಣ್ಯ ಸಚಿವ ಗಣೇಶ್ ನಾಯಕ್ ಗುರುವಾರ ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (NMMC) ಚುನಾವಣೆಯಲ್ಲಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನಾಪತ್ತೆಯಾದ ಕಾರಣ ಮತ ಚಲಾವಣೆಗೆ ಕೆಲವು ಗಂಟೆಗಳ ಕಾಲ ಕಾಯಬೇಕಾಯಿತು.
ಸಚಿವರು ಮತ್ತು ಅವರ ಕುಟುಂಬಸ್ಥರ ಹೆಸರು ಕೋಪರ್ಖೈರನೆ ಪ್ರದೇಶದ ಸೇಂಟ್ ಮೇರಿ ಶಾಲೆಯ ಮತದಾರರ ಪಟ್ಟಿಯಲ್ಲಿ ಕೊನೆಗೂ ಕಂಡುಬಂದಿದೆ. ಅಲ್ಲಿ ಅವರು ಕುಟುಂಬದ ಸದಸ್ಯರಾದ ಸಂಜೀವ್ ನಾಯಕ್ ಮತ್ತು ಕಲ್ಪನಾ ನಾಯಕ್ ಅವರೊಂದಿಗೆ ಮತ ಚಲಾಯಿಸಿದರು.
“ನಾನು ಹಲವು ವರ್ಷಗಳಿಂದ ನವಿ ಮುಂಬೈ ಶಾಲೆ ಸಂಖ್ಯೆ 94ರ ಮತಗಟ್ಟೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಮತ ಚಲಾಯಿಸುತ್ತಿದ್ದೇನೆ. ಆದರೆ ಈ ಬಾರಿ ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಮತದಾನ ನಡೆಯಲಿದೆ ಎಂದು ನನಗೆ ತಿಳಿಸಲಾಯಿತು. ನಾನು ಅಲ್ಲಿಗೆ ಹೋದಾಗ, ಮಾಹಿತಿ ನೀಡಿದಂತೆ ಕೊಠಡಿ ಸಂಖ್ಯೆ 9 ಇರಲಿಲ್ಲ, ಮತ್ತು ನನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇರಲಿಲ್ಲ, ಆದ್ದರಿಂದ ನಾನು ಮೊದಲು ಮತ ಚಲಾಯಿಸಲು ಸಾಧ್ಯವಾಗಲಿಲ್ಲ,” ಎಂದು ನಾಯಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನನ್ನ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ನವಿ ಮುಂಬೈನಲ್ಲಿ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಆದರೆ ನಮ್ಮ ಹೆಸರುಗಳನ್ನು ಮೂರು ವಿಭಿನ್ನ ಮತದಾನ ಕೇಂದ್ರಗಳಿಗೆ ವಿಂಗಡಿಸಲಾಗಿದೆ. ಇದರಲ್ಲಿ ರಾಜ್ಯ ಚುನಾವಣಾ ಆಯೋಗದ ಲೋಪವಿದೆ
ನನ್ನಂತಹ ಸಚಿವನೇ ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆಯಂತಹ ಸಮಸ್ಯೆ ಎದುರಿಸುವುದಾದರೆ, ಸಾಮಾನ್ಯ ಮತದಾರರ ಪರಿಸ್ಥಿತಿ ಬಗ್ಗೆ ಊಹಿಸಬಹುದು ಎಂದು ಅವರು ಹೇಳಿದ್ದಾರೆ.





