ಮಹಾರಾಷ್ಟ್ರ | ವಿಧಾನಸಭೆ ಕಲಾಪದ ವೇಳೆ ರಮ್ಮಿ ಆಡುತ್ತಿದ್ದ ಕೃಷಿ ಸಚಿವ : ವೀಡಿಯೊ ವೈರಲ್

Screengrab: X/@RRPSpeaks
ಮುಂಬೈ : ಮಹಾರಾಷ್ಟ್ರ ಕೃಷಿ ಸಚಿವ ಮಾಣಿಕ್ ರಾವ್ ಕೊಕಟೆ ವಿಧಾನಸಭೆ ಕಲಾಪ ನಡೆಯುತ್ತಿದ್ದ ವೇಳೆ ತನ್ನ ಫೋನ್ನಲ್ಲಿ ಜಂಗ್ಲಿ ರಮ್ಮಿ ಆಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಶರದ್ ಪವಾರ್ ಬಣದ ಎನ್ಸಿಪಿ ನಾಯಕ ರೋಹಿತ್ ಪವಾರ್ ಈ ಕುರಿತ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. ʼಲೆಕ್ಕವಿಲ್ಲದಷ್ಟು ಕೃಷಿ ಸಮಸ್ಯೆಗಳು ಬಾಕಿ ಉಳಿದಿವೆ ಮತ್ತು ರಾಜ್ಯದಲ್ಲಿ ಪ್ರತಿದಿನ 8 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಯಾವುದೇ ಕೆಲಸವಿಲ್ಲದೆ ಕೃಷಿ ಸಚಿವರು ರಮ್ಮಿ ಆಡುತ್ತಿದ್ದಾರೆʼ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್ ಈ ಕುರಿತು ಪ್ರತಿಕ್ರಿಯಿಸಿ, ‘ರಾಜ್ಯದಲ್ಲಿ ರೈತರು ನಿರಂತರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಕೃಷಿ ಸಚಿವರು ತಮ್ಮ ಮೊಬೈಲ್ನಲ್ಲಿ ರಮ್ಮಿ ಆಡುತ್ತಿದ್ದಾರೆ. ಮಹಾಯುತಿ ಸರಕಾರ ರೈತರ ಬಗ್ಗೆ ಕಾಳಜಿ ವಹಿಸುವುದಿಲ್ಲ. ರೈತರನ್ನು ವಂಚಿಸುತ್ತಿದೆ ಎಂದು ಟೀಕಿಸಿದ್ದಾರೆ.
ರಮ್ಮಿ ಆಡುತ್ತಿರುವ ವೀಡಿಯೊ ವೈರಲ್ ಬೆನ್ನಲ್ಲೇ ಸಚಿವ ಮಾಣಿಕ್ ರಾವ್ ಕೊಕಟೆ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು ಎಂದು ಸಂಸದೆ ಸುಪ್ರಿಯಾ ಸುಳೆ ಒತ್ತಾಯಿಸಿದ್ದಾರೆ.







